Index   ವಚನ - 19    Search  
 
ಆದಿ ಅನಾದಿಯೆಂಬವು ನಾದಕ್ಕೆ ಬಾರದ ಮುನ್ನ, ಶೂನ್ಯ ನಿಃಶ್ಶೂನ್ಯ ಸುರಾಳವೆಂಬವು ಸುಳುಹುದೋರದ ಮುನ್ನ, ಬೆಳಗು ಕತ್ತಲೆಯಿಲ್ಲದ ಮುನ್ನ, ಅಳಿವು ಉಳಿವು ಸುಳುವು ಸೂತ್ರ ಜಂತ್ರ ಜಡ ಅಜಡವಿಲ್ಲದ ಮುನ್ನ, ಕಡೆ ನಡು ಮೊದಲಿಲ್ಲದ ಅಡಿಯಲಾಧಾರ ಹಿಡಿವರೆ ರೂಹಿಲ್ಲದ ಮುನ್ನ, ಒಡೆಯನಿಲ್ಲ ಬಂಟನಿಲ್ಲ ನಡೆಯಿಲ್ಲ ನುಡಿಯಿಲ್ಲ ಬೆಡಗಿಲ್ಲ ಒಡಲಿಲ್ಲದ ಮುನ್ನ, ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಚಂದ್ರ, ಸೂರ್ಯರು ತಲೆದೋರದ ಮುನ್ನ, ದೇವನಿಲ್ಲ ಭಕ್ತನಿಲ್ಲದ ಮುನ್ನ, ನೀನು ನಾನುಯಿಲ್ಲದ ಮುನ್ನ, ಆಕಾರ ನಿರಾಕಾರವೇನೂಯಿಲ್ಲದ ಮುನ್ನ, ತಾನು ತಾನೆಂಬ ತಲ್ಲಣವಿಲ್ಲದಂದು, ಆ ಬಟ್ಟಬಯಲ ಬ್ರಹ್ಮವೆ ಘಟ್ಟಿಯಾದ ಘನವೆಂತೆಂದಡೆ: ನಿಮ್ಮನುವ ನೀವರಿದ ಘನಮಹಿಮರು ತಿಳಿದು ನೋಡಿರಣ್ಣ. ಆ ಬಟ್ಟಬಯಲೆಂದಡಾರು ಬಸವ, ಆ ಬಸವನೆಂದಡಾರು ಬಟ್ಟಬಯಲು. ಆ ಬ್ರಹ್ಮನೆಂದಡಾರು ಬಸವ, ಬಸವನೆಂದಡಾರು ಬ್ರಹ್ಮ. ಅಂತಪ್ಪ ಬಸವನ ಆ ಮೂಲವ ಬಲ್ಲವರು ನೀವು ಕೇಳಿರಣ್ಣ. ಬಸವ ಎಂಬ ಮೂರಕ್ಷರವೆ ಮೂಲಪ್ರಣವ. ಅದೆಂತೆಂದಡೆ: ಬಯೆಂಬುದೆ ಚಿನ್ನಾದ ಆಕಾರವಾಯಿತ್ತು, ಸಯೆಂಬುದೆ ಚಿದ್ಬಿಂದುವಾಯಿತ್ತು, ಮತ್ತಂ ಬಯೆಂಬುದೆ ಅಕಾರವಾಯಿತ್ತು, ಸ ಎಂಬುದೆ ಉಕಾರವಾಯಿತ್ತು. ವಾ ಯೆಂಬುದೆ ಚಿತ್ಕಳೆಯಾಯಿತ್ತು. ಮತ್ತಂ ಬಯೆಂಬುದೆ ಆಕಾರವಾಯಿತ್ತು, ಸ ಎಂಬುದೆ ಉಕಾರವಾಯಿತ್ತು. ವಾಯೆಂಬುದೆ ಮಕರವಾಯಿತ್ತು. ಮತ್ತೆ ಬಯೆಂಬುದೆ ನಾದವಾಯಿತ್ತು, ಸಯೆಂಬುದೆ ಬಿಂದುವಾಯಿತ್ತು, ವಾಯೆಂಬುದೆ ಕಳೆಯಾಯಿತ್ತು. ಮತ್ತೆ ಬ ಎಂಬುದೆ ಗುರುವಾಯಿತ್ತು, ಸಯೆಂಬುದೆ ಅಂಗವಾಯಿತ್ತು, ವಾ ಎಂಬುದೆ ಜಂಗಮವಾಯಿತ್ತು. ಬ ಎಂಬ ನಾದವೆತ್ತಲು, ಸ ಎಂಬ ಬಿಂದು ಕೂಡಲು, ವಾಯೆಂಬ ಕಳೆ ಬೆರೆಯಲು, ಗೋಳಕಾಕಾರವಾಗಿ ಆದಿಪ್ರಣಮವೆನಿಸಿತ್ತು. ಆದಿಪ್ರಣಮ, ಅನಾದಿಪ್ರಣಮ, ಅಂತ್ಯಪ್ರಣಮವೆಂಬವು ನಮ್ಮ ಬಸವಣ್ಣನ ಸ್ಥೂಲ ಸೂಕ್ಷ್ಮ ಕಾರಣ ಕಾಣಿರೆ. ಇಂತಪ್ಪ ಬಸವಣ್ಣ ಬಯಲಬ್ರಹ್ಮವನೆ ಮೆಯಿದು, ಮೆಲುಕಿರಿದು ಗೋಮಯವಿಕ್ಕಲು ಪೃಥ್ವಿಯಾಯಿತ್ತು. ಇಂತಪ್ಪ ಬಸವಣ್ಣ ಜಲವ ಬಿಡಲು ಅಪ್ಪುಮಯವಾಯಿತ್ತು. ಇಂತಪ್ಪ ಬಸವಣ್ಣನ ತೇಜವೆ ಅಗ್ನಿಯಾಯಿತ್ತು. ಇಂತಪ್ಪ ಬಸವಣ್ಣನ ಉಚ್ಛ್ವಾಸ ನಿಶ್ವಾಸವೆ ವಾಯುವಾಯಿತ್ತು. ಇಂತಪ್ಪ ಬಸವಣ್ಣನ ಶಬ್ದವೆ ಆಕಾಶವಾಯಿತ್ತು. ಇಂತಪ್ಪ ಬಸವಣ್ಣನ ಕಂಗಳ ಬೆಳಗೆ ಚಂದ್ರ ಸೂರ್ಯರಾದರು. ಇಂತಪ್ಪ ಬಸವಣ್ಣನ ಬುದ್ಧಿಯೆ ಆತ್ಮವೆನಿಸಿ, ಅಷ್ಟತನುಮೂರ್ತಿಯೆ ತನುವೆನಿಸಿ, ಪಿಂಡ ಬ್ರಹ್ಮಾಂಡ ಕೋಟ್ಯನುಕೋಟಿ ಅಂಡಪಿಂಡಾಂಡಂಗಳಿಗೆ ಒಡಲಾಗಿ, ಅಡಿಮುಡಿಗೆ ತಾನೆ ಆದಿಯಾಗಿ, ಸರ್ವವೂ ನಮ್ಮ ಬಸವಣ್ಣನ ಒಡಲಲ್ಲಿ ಹುಟ್ಟುತ್ತ ಬೆಳೆಯುತ್ತ ಅಳಿವುತಿಪ್ಪವು ಕಾಣಿರೆ. ಇಂತಪ್ಪ ಸಕಲಪ್ರಾಣಿಗಳಿಗೆ ನಮ್ಮ ಬಸವಣ್ಣನ ಗೋಮಯದಲ್ಲಿ ಹುಟ್ಟಿದ ಪೃಥ್ವಿಯೆ ಪದಾರ್ಥ ಆದಿಜಲದಿಂದ ಹುಟ್ಟಿದ ಉದಕವೆ ಸಾರ. ತೇಜದಿಂದ ಹುಟ್ಟಿದ ಅಗ್ನಿಯೆ ಕಳೆ. ಉಚ್ಛ್ವಾಸ ನಿಶ್ವಾಸದಿಂದ ಹುಟ್ಟಿದ ಚಂದ್ರಸೂರ್ಯರೇ ಅರಿವು ಮರವೆ. ಬುದ್ಧಿಯಿಂದ ಹುಟ್ಟಿದ ಆತ್ಮನೆ ಚೈತನ್ಯಾತ್ಮ. ಇಂತೀ ಸರ್ವಪ್ರಾಣಿಗಳಿಗೆ ನಮ್ಮ ಬಸವಣ್ಣನೆ ಆದಿ ಕಾಣಿರೇ. ಆದಿಯಲ್ಲಿ ಹುಟ್ಟಿ, ಮಧ್ಯದಲ್ಲಿ ಬೆಳೆದು, ಅಂತ್ಯದಲ್ಲಿ ಲಯವನೆಯ್ದಿದರೆ, ಮತ್ತೆ ನಿಲ್ಲುವದಕ್ಕೆ ನಮ್ಮ ಬಸವಣ್ಣನೆ ಆದಿ ಕಾಣಿರೆ. ಇಂತೀ ಸಕಲಪ್ರಾಣಿಗಳ ಒಳ ಹೊರಗೆ ಕೈಕೊಂಬರೆ, ದೇವರು ಬೇರೊಬ್ಬರುಂಟಾದರೆ ಬಲ್ಲರೆ ನೀವು ಹೇಳಿ ತೋರಿರೆ. ಅಲ್ಲದಿರ್ದರೆ ನಿಮ್ಮ ವೇದಾಗಮಶಾಸ್ತ್ರಪುರಾಣಗಳ ಕೈಯಲ್ಲಿ ಹೇಳಿಸಿರೆ. ಇಂತೀ ಅನಾದಿಸಂಸಿದ್ಧ ಬಟ್ಟಬಯಲಬ್ರಹ್ಮವೆ ಬಸವನೆಂಬುದಂ ಕಾಣುತಿರ್ದು ಕೇಳುತಿರ್ದು ಹೇಳುತಿರ್ದು ಅರಿದಿರ್ದು, ಮತ್ತೆ ಕೀಳುದೈವಂಗಳನಾರಾಧಿಸಿ ಅರ್ಚನೆ ಪೂಜೆಯ ಹಲವು ಚಂದದಲ್ಲಿ ಮಾಡಿ, ಹಲವು ಜಾತಿ ಹಲವು ದರುಶನವೆನಿಸಿಕೊಂಡುಸ ಹೊಲಬುದಪ್ಪಿದಿರಿ, ಹುಲುಮನುಜರಿರಾ. ಇನ್ನಾದರೂ ಅರಿದು ನೆನದು ಬದುಕಿ, ನಮ್ಮ ಬಸವಪ್ರಿಯ ಕೂಡಲಚೆನ್ನಸಂಗಮದೇವನ ಶ್ರೀಪಾದಪದ್ಮವ.