ಆದಿ ಅನಾದಿಯೆಂಬವು ಸಂಗಷ್ಟವಾಗಿರ್ದು, ವಿಭೇದವಾಗುವಲ್ಲಿ
ಕುಂಡಲಿಯ ಶಕ್ತಿಯಲ್ಲಿ ಪ್ರಾಣವಾಯು ಪ್ರಣವಸ್ವರವನೊಡಗೂಡಿ
ಬ್ರಹ್ಮಸ್ಥಾನದಲ್ಲಿ ಸ್ಥಾಪ್ಯ ಶಿವನಾಗಿ,
ಭ್ರೂಮಧ್ಯಕಂಠಸ್ಥಾನದಲ್ಲಿ ನಿಃಕಲಸ್ವರೂಪನಾಗಿ,
ಹೃದಯನಾಭಿಯಲ್ಲಿ ಸಕಲನಿಃಕಲನಾಗಿ,
ಸ್ವಾಧಿಷ್ಠಾನ ಆಧಾರದಲ್ಲಿ ಕೇವಲ ಸಖನಾಗಿ,
ಆ ಸಕಲಕ್ಕೆ ಎರಡು ಪಾದವನಿತ್ತು,
ಒಂದು ಪಾದಕ್ಕೆ ಕ್ರಿಯಾಶಕ್ತಿ, ಒಂದು ಪಾದಕ್ಕೆ ಜ್ಞಾನಶಕ್ತಿಯ ಮಾಡಿ ನಿಲ್ಲಿಸಿ,
ಮೇಲಣ ಸಕಲ ನಿಃಕಲತತ್ತ್ವಕೈದಿ, ಅಲ್ಲಿಗೆ ಎರಡು ಹಸ್ತವನಿತ್ತು,
ಒಂದು ಹಸ್ತಕ್ಕೆ ಆದಿಶಕ್ತಿ, ಒಂದು ಹಸ್ತಕ್ಕೆ ಇಚ್ಛಾಶಕ್ತಿಯನಾದಿ ಮಾಡಿ ನಿಲಿಸಿ,
ಮೇಲಣ ನಿಃಕಲತತ್ತ್ವವನೈದಿ, ಅಲ್ಲಿಗೆ ನಾಲ್ಕು ಪಾದವನಿತ್ತು,
ಅವು ಆವವು ಎಂದಡೆ, ಜಿಹ್ವೆ ಘ್ರಾಣ ನೇತ್ರ ಶ್ರೋತ್ರವೆಂಬ
ನಾಲ್ಕು ಪಾದವನಾದಿಮಾಡಿ ನಿಲ್ಲಿಸಿ,
ನಾಲ್ಕು ಪಾದವಂ ನಿಲ್ಲಿಸಿದುದರಿಂದ ನಂದಿಯೆಂಬ ನಾಮವಾಯಿತ್ತು.
ಆ ನಂದೀಶ್ವರಂಗೆ ಚಿತ್ಶಕ್ತಿಯೆ ಅಂಗ, ಪರಶಕ್ತಿಯೆ ಮುಖ.
ಇಂತಪ್ಪ ನಂದೀಶ್ವರ ನಲಿದಾಡಿ ಅನಾದಿ ಪರಶಿವ ಅಖಿಳ ಬ್ರಹ್ಮಾಂಡವ
ಹೊತ್ತಿಪ್ಪನಲಾಯೆಂದರಿದು,
ಆದಿವಾಹನವಾದನು, ಅದೀಗ ಆದಿವೃಷಭನೆಂಬ ನಾಮವಾಯಿತ್ತು.
ಆದಿವೃಷಭನ ಆದಿಯಲ್ಲಿ ಪರಶಿವನಿಪ್ಪನು,
ಆ ಪರಶಿವನಾದಿಯಲ್ಲಿ ನಿಃಕಲವಿಪ್ಪುದು,
ಆ ನಿಃಕಲದಾದಿಯಲ್ಲಿ ಸಕಲ ನಿಃಕಲವಿಪ್ಪುದು.
ಆ ಸಕಲ ನಿಃಕಲದಾದಿಯಲ್ಲಿ ಕೇವಲ ಸಕಲವಿಪ್ಪುದು.
ಆ ಸಕಲವೆಂದರೆ ಅನಂತತತ್ತ್ವ.
ಬ್ರಹ್ಮಾಂಡ ಕೋಟ್ಯನುಕೋಟಿ ಲೋಕಾಲೋಕಂಗಳು
ದೇವದಾನವ ಮಾನವರು
ಸಚರಾಚರ ಎಂಬತ್ತನಾಲ್ಕು ಲಕ್ಷ ಜೀವಜಂತುಗಳುದ್ಭವಿಸಿದವು.
ಆ ಪಿಂಡ ಬ್ರಹ್ಮಾಂಡದ ಹೊರೆಯಲ್ಲಿ ಸಕಲ ಪದಾರ್ಥಗಳುದ್ಭವಿಸಿದವು.
ಸಕಲ ಪದಾರ್ಥಂಗಳ ಪುಣ್ಯಪಾಪದ ಸಾರವ ಕೈಕೊಂಬುದಕ್ಕೆ
ದೇವನಾವನುಂಟೆಂದು ಆಹ್ವಾನಿಸಿ ನೋಡಲು,
ಆ ನಿಃಕಲ ಮಹಾಲಿಂಗವೆ ಕ್ರಿಯಾಶಕ್ತಿಯ ಮುಖದಲ್ಲಿ ಇಷ್ಟಲಿಂಗವಾಗಿ ಬಂದು,
ಜ್ಞಾನಶಕ್ತಿ ಮುಖದಲ್ಲಿ ಸಕಲ ಪದಾರ್ಥಂಗಳ ಕೈಕೊಂಬಲ್ಲಿ,
ಪುಣ್ಯಪಾಪಂಗಳ ಸಾರವಳಿದು, ಲಿಂಗ ಸಾರವಾದ ರೂಪ ಇಷ್ಟಲಿಂಗಕ್ಕೆ ಕೊಟ್ಟು,
ಆ ರುಚಿ ಪ್ರಸಾದವ ಜ್ಞಾನಶಕ್ತಿ ಆದಿಶಕ್ತಿ ಕೈಯಲ್ಲಿಪ್ಪ ಪ್ರಾಣಲಿಂಗಕ್ಕೆ
ಇಚ್ಛಾಶಕ್ತಿಯ ಮುಖದಲ್ಲಿ ಕೊಡಲು,
ಆ ರುಚಿ ಪ್ರಸಾದವ ಪ್ರಾಣಲಿಂಗವಾರೋಗಿಸಿ, ಪರಮ ಪರಿಣಾಮವನೈದಲು,
ಆ ಪರಿಣಾಮ ಪ್ರಸಾದವ ಜ್ಞಾನಶಕ್ತಿಯು ನಂದೀಶ್ವರಂಗೆ ಕೊಡಲು,
ಆ ಪರಮ ತೃಪ್ತಿಯ ಶೇಷ ನಂದೀಶ್ವರ ಆರೋಗಿಸಿ ಪರವಶವನೈದಲು,
ಆ ಪರವಶದ ಶೇಷವ ಜ್ಞಾನಶಕ್ತಿ ಆರೋಗಿಸಿ,
ಅಡಿಮುಡಿಗೆ ತಾನೆ ಆದಿಯಾಗಲು,
ಅದೀಗ ಅಡಿಮುಡಿಯ ಶೇಷ ಹೊತ್ತಿಪ್ಪನೆಂದು
ವೇದಾಗಮಶಾಸ್ತ್ರಪುರಾಣಪುರುಷರು ನುಡಿಯುತಿಪ್ಪರು.
ಇಂತಪ್ಪ ಬಸವನ ಆದಿಮೂಲವ ಬಲ್ಲ ಶರಣನಾಯಿತ್ತು ತೊತ್ತು
ಮುಕ್ಕುಳಿಸಿ ಉಗುಳುವ ಪಡುಗ,
ಮೆಟ್ಟುವ ಚರ್ಮ ಹಾವುಗೆಯಾಗಿ ಬದುಕಿದೆನು ಕಾಣಾ,
ಬಸವಪ್ರಿಯ ಕೂಡಲ[ಚೆನ್ನ]ಸಂಗಮದೇವಾ,
ನಿಮ್ಮ ಧರ್ಮ ನಿಮ್ಮ ಧರ್ಮ.