Index   ವಚನ - 20    Search  
 
ಆಧಾರಚಕ್ರದಲ್ಲಿ ನಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ಬ್ರಹ್ಮನು ಉತ್ತರಖಂಡಣೆಯೆಂಬ ವೇದವನುಚ್ಚರಿಸುತ್ತಿಹನು. ಸ್ವಾಧಿಷ್ಠಾನಚಕ್ರದಲ್ಲಿ ಮಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ವಿಷ್ಣು ಪ್ರೌಢಲಕ್ಷಿತವೆಂಬ ವೇದವನುಚ್ಚರಿಸುತ್ತಿಹನು. ಮಣಿಪೂರಕಚಕ್ರದಲ್ಲಿ ಶಿಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ರುದ್ರನು ಋಗ್ವೇದವನುಚ್ಚರಿಸುತ್ತಿಹನು. ಅನಾಹತಚಕ್ರದಲ್ಲಿ ವಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ಈಶ್ವರನು ಯಜುರ್ವೇದವನುಚ್ಚರಿಸುತ್ತಿಹನು. ವಿಶುದ್ಧಿಚಕ್ರದಲ್ಲಿ ಯಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ಸದಾಶಿವ ಸಾಮವೇದವನುಚ್ಚರಿಸುತ್ತಿಹನು. ಆಜ್ಞಾಚಕ್ರದಲ್ಲಿ ಒಂಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ಉಪಮಾತೀತನು ಅಥರ್ವಣವೇದವನುಚ್ಚರಿಸುತ್ತಿಹನು. ಬ್ರಹ್ಮರಂಧ್ರದಲ್ಲಿ ಅಕಾರ ಉಕಾರ ಮಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ಪ್ರಕೃತಿ ವಿಕೃತಿಗಳು ಗಾಯತ್ರಿಯನುಚ್ಚರಿಸುತ್ತಿಹವು. ಇಂತಿವೆಲ್ಲವನರಿದು ಮರದು, ನಿಜಲಿಂಗ ನಿಜಮಂತ್ರಂಗಳಲ್ಲಿ ಪರವಶವಾಗಿರ್ದೆನು ಕಾಣಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.