ಎಲೆ ನಿರೀಶ್ವರವಾದಿಗಳಿರಾ ನೀವು ಕೇಳಿರೆ:
ನಿಮ್ಮ ನಿಟಿಲತಟದಲ್ಲಿ
ಸಂಚಿತ ಪ್ರಾರಬ್ಧ ಆಗಮಿಯೆಂಬ ಲಿಖಿತವ ಬರೆದವರಾರು? ಕೇಳಿರೆ.
ನೀವು ನೀವೇ ಬ್ರಹ್ಮವು, ಬೇರೆ ಈಶ್ವರನಿಲ್ಲೆಂದು ನುಡಿವಿರಿ.
ತಪಸ್ಸು ತನ್ನಂತೆ ಊಟ ಮನದಿಚ್ಛೆಯೆಂಬ ಗಾದೆಯ ಮಾತು ನಿಮಗಾಯಿತ್ತು.
ಅನ್ನವನುಂಡು, ವ್ಯಸನಕ್ಕೆ ಹರಿದು, ವಿಷಯಂಗಳೆಂಬ ಹಿಡಿಮಲಕ್ಕೆ ಸಿಕ್ಕಿ,
ಪಂಚೇಂದ್ರಿಯಂಗಳೆಂಬ ನಾಯಿಗಳಿಚ್ಛೆಗೆ ಹರಿದು,
ನಾಯಾಗಿ ಬಗಳಿ, ನಾಯಡೋಣಿಯಲುಂಡು
ನಾಯಿಸಾವು ಸಾವ ಅದ್ವೈತಿಗಳಿರಾ,
ನಿಮಗೇಕೋ ಬೊಮ್ಮದ ಮಾತು?
ಬ್ರಹ್ಮ ವಿಷ್ಣ್ವಾದಿಗಳು ಬ್ರಹ್ಮೋಹಮೆಂದು
ಕೆಮ್ಮನೆ ಕೆಟ್ಟು, ಹದ್ದು ಹೆಬ್ಬಂದಿಗಳಾದುದನರಿಯಿರೆ.
ಹಮ್ಮಿನಿಂದ ಸನತ್ಕುಮಾರ ಒಂಟಿಯಾದುದನರಿಯಿರೆ.
ಕರ್ತನು ಭರ್ತನು ಹರ್ತನು ಶಿವನಲ್ಲದೆ
ಬೇರೆ ಕಾವಲ್ಲಿ ಕೊಲುವಲ್ಲಿ ಮತ್ತೊಬ್ಬರುಳ್ಳರೆ ಹೇಳಿರೆ.
ಅದೆಂತೆಂದಡೆ:
ತ್ವಂ ವಿಶ್ವಕರ್ತಾ ತವ ನಾಸ್ತಿ ಕರ್ತಾ ತ್ವಂ ವಿಶ್ವಭಕ್ತಾ ತನ್ನ ತವ ನಾಸ್ತಿ ಭರಾ |
ತ್ವಂ ವಿಶ್ವಹರ್ತಾ ತವ ನಾಸ್ತಿ ಹರ್ತಾ ತ್ವಂ ವಿಶ್ವನಾಥಸ್ತವ ನಾಸ್ತಿ ನಾಥಃ ||
ಎಂದುದಾಗಿ, ಶಿವನೇ ನಿಮ್ಮನಿಲ್ಲೆಂದು,
ಬೊಮ್ಮ ತಾವೆಂಬ ಹಮ್ಮಿನ ಅದ್ವೈತಿಗಳ ಹಿಡಿದು,
ಕಾಲನ ಕೈಯಲ್ಲಿ ಕೆಡಹಿ, ಬಾಯಲ್ಲಿ ಹುಡಿಯ ಹೊಯಿಸಿ,
ನರಕಾಗ್ನಿಯಲ್ಲಿ ಅಕ್ಷಯಕಾಲವಿರಿಸದೆ ಮಾಣ್ಬನೆ,
ನಮ್ಮ ಬಸವಪ್ರಿಯ ಕೂಡಲಚೆನ್ನಸಂಗಮದೇವ.
Art
Manuscript
Music
Courtesy:
Transliteration
Ele nirīśvaravādigaḷirā nīvu kēḷire:
Nim'ma niṭilataṭadalli
san̄cita prārabdha āgamiyemba likhitava baredavarāru? Kēḷire.
Nīvu nīvē brahmavu, bēre īśvaranillendu nuḍiviri.
Tapas'su tannante ūṭa manadiccheyemba gādeya mātu nimagāyittu.
Annavanuṇḍu, vyasanakke haridu, viṣayaṅgaḷemba hiḍimalakke sikki,
pan̄cēndriyaṅgaḷemba nāyigaḷicchege haridu,
nāyāgi bagaḷi, nāyaḍōṇiyaluṇḍu
nāyisāvu sāva advaitigaḷirā,
nimagēkō bom'mada mātu?
Brahma viṣṇvādigaḷu brahmōhamendu
kem'mane keṭṭu, haddu hebbandigaḷādudanariyire.
Ham'mininda sanatkumāra oṇṭiyādudanariyire.
Kartanu bhartanu hartanu śivanallade
bēre kāvalli koluvalli mattobbaruḷḷare hēḷire.
Adentendaḍe:
Tvaṁ viśvakartā tava nāsti kartā tvaṁ viśvabhaktā tanna tava nāsti bharā |
tvaṁ viśvahartā tava nāsti hartā tvaṁ viśvanāthastava nāsti nāthaḥ ||
endudāgi, śivanē nim'manillendu,
bom'ma tāvemba ham'mina advaitigaḷa hiḍidu,
kālana kaiyalli keḍahi, bāyalli huḍiya hoyisi,
narakāgniyalli akṣayakālavirisade māṇbane,
nam'ma basavapriya kūḍalacennasaṅgamadēva.