Index   ವಚನ - 33    Search  
 
ಕಾಮಸಂಹಾರಿ, ಹರಿಯಜರಹಂಕಾರ ದರ್ಪಚ್ಚೈದನ ಲಿಂಗವೆಂದೆಂಬರು, ಅದ ನಾವರಿಯೆವಯ್ಯಾ! ನಾವು ಬಲ್ಲುದಿಷ್ಟಲ್ಲದೆ ಕಾಮ ಕ್ರೋಧ ಲೋಭ ಮೋಹ ಮಾತ್ಸರ್ಯವಿರಹಿತರು, ನಮ್ಮ ಜಂಗಮದೇವರು ಕಾಣಿರಯ್ಯಾ! ಇಹನಾಸ್ತಿ ಪರನಾಸ್ತಿ ಫಲಪಥಕ್ಕೆ ಹೊರಗಾಗಿ ಮಾಡುವ ಭುಕ್ತಿಯ ಕೊಟ್ಟು, ಮುಕ್ತಿಯನೀವ. ಚರಿಸಿದಡೆ ವಸಂತ, ನಿಂದಡೆ ನೆಳಲಿಲ್ಲ, ನಡೆದಡೆ ಹೆಜ್ಜೆಯಿಲ್ಲ. ದಗ್ಧಪಟನ್ಯಾಯ, ಯಥಾಸ್ವೇಚ್ಛ ತನ್ನ ನಿಲುವು ಅದಾರಿಗೆ ವಿಸ್ಮಯ, ಅಗೋಚರ. ಚರಾಚರಾ ಸ್ಥಾವರಾತ್ಮಕನು ನಮ್ಮ ಜಂಗಮದೇವರು ಕಾಣಿರಯ್ಯಾ. ಆ ಜಂಗಮವು ಭಕ್ತರಿಗೆ ಚರಣವ ಕರುಣಿಪನು. ಆ ಭಕ್ತರು ಪಾದಪ್ರಕ್ಷಾಲನಂ ಗೆಯ್ದು, ಗಂಧಾಕ್ಷತೆ ಪುಷ್ಪ ಧೂಪ ದೀಪ ನೈವೇದ್ಯ ತಾಂಬೂಲ ವಿಭೂತಿ ರುದ್ರಾಕ್ಷಿಯಂ ಧರಿಸಿ, ಮೈವಾಸವಂ ಭೂಷಣ ಎರೆದಲೆಯನ ಕರದಲ್ಲಿ ಹಿಡಿದು, ಆ ಜಂಗಮದೇವರು ತೀರ್ಥವನೀವುದಯ್ಯಾ. ಆಮೇಲೆ ತಂಡ ಮೊತ್ತಕ್ಕೆ ಮಂಡೆ ಬಾಗಿ, ತಮ್ಮಿಷ್ಟಲಿಂಗಕ್ಕೆ ಮುಷ್ಟಿ ಅರ್ಪಿಸಿ, ತಾವು ಸಲಿಸುವುದಯ್ಯಾ. ಆಮೇಲೆ ಗಣಸಮೂಹವು, ತಾವು ರೋಹ ಅವರೋಹದಿಂದ ಅರ್ಪಿತವ ಮಾಡುವದು, ಆಗಮಾಚಾರವಯ್ಯಾ. ಲಿಂಗ ನಿರ್ಮಾಲ್ಯವನೆ ಲಿಂಗಕ್ಕೆ ಮತ್ತೆ ಮತ್ತೆ ಧರಿಸುವೆ, ಭಾವನಿರ್ಭಾವವನರಿದು, ಇನ್ನೊಂದು ನಿರಂತರದ ಅವಧಾನವುಂಟು. ತಾ ಪ್ರಸಾದವ ಸವಿವಾಗ, ಜಂಗಮಲಿಂಗಕ್ಕೆ ಪದಾರ್ಥವ ಸಮೀಪಸ್ಥವ ಮಾಡಲು, ಅದೇ ಹಸ್ತದಲ್ಲಿ ಸಜ್ಜಾಗೃಹಕ್ಕೆ ಸಮರ್ಪಿಸಿಕೊಂಬುವದೊಂದವಧಾನ. ಆಚೆಗೆ ತೀರ್ಥ ಸಂಬಂಧಿಸಿ, ಎಯ್ದದಿರಲ್ಲದರಲ್ಲಿ ಪಾದೋದಕವ ನೀಡುವದ ದಯಗೊಟ್ಟಡೆ ಸಂದಿಲ್ಲ. ಅವು ಮೂರು, ಇವು ಮೂರು, ಆಚೆ ಹನ್ನೊಂದು, ಈಚೆ ಹತ್ತರ ಅರುವತ್ತರಾಯ ಸಂದಿತ್ತು. ಭಾಷೆ ಪೂರೈಸಿತ್ತು, ಲೆಕ್ಕ ತುಂಬಿತ್ತು, ಬಿತ್ತಕ್ಕೆ ವಟ್ಟವಿಲ್ಲ, ಕಾಳೆಗ ಮೊಗವಿಲ್ಲ. ಕಾಳಿಂಗನ ಹಸ್ತಾಭರಣ, ನಮ್ಮ ಜಂಗಮಲಿಂಗಕ್ಕಯ್ಯಾ! ಇಂತಪ್ಪ ಈ ನಡೆಯನರಿದಾಚರಿಸಿದ ಸಂಗನಬಸವಣ್ಣಂಗೆ ಆಯತವನಾಯತವೆಂಬ ಅನಾಚಾರಿಯನು ಎನ್ನ ಮುಖದತ್ತ ತೋರದಿರಯ್ಯಾ. ಆ ಮಹಾಮಹಿಮನ ಹೆಜ್ಜೆ ಹೆಜ್ಜೆಗಶ್ವಮೇಧಫಲ ತಪ್ಪದಯ್ಯಾ. ಆ ಸಿದ್ಧಪುರುಷಂಗೆ ನಮೋ ನಮೋ ಎಂಬೆನು ಕಾಣಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.