ಶ್ರೀವಿಭೂತಿಯ ಬಿಟ್ಟು ತಪಸ್ಸು ಮಾಡಿದಡೆ,
ಆ ತಪಸ್ಸಿನ ಸಿದ್ಧಿ ಬಯಲು.
ಶ್ರೀವಿಭೂತಿಯ ಬಿಟ್ಟು ದೀಕ್ಷೆಯ ಕೊಂಡಡೆ,
ಆ ದೀಕ್ಷೆಯೆಲ್ಲ ಬಯಲು.
ಶ್ರೀವಿಭೂತಿಯ ಬಿಟ್ಟು ಮಂತ್ರಂಗಳ ಸಾಧಿಸಿದೆಡೆ,
ಆ ಮಂತ್ರಸಿದ್ಧಿಯು ಬಯಲು.
ಶ್ರೀವಿಭೂತಿಯ ಬಿಟ್ಟು ಯಜ್ಞಂಗಳ ಸಾಧಿಸಿದಡೆ,
ಆ ಯಜ್ಞಸಿದ್ಧಿಯು ಬಯಲು.
ಶ್ರೀವಿಭೂತಿಯ ಬಿಟ್ಟು ದೇವತಾರ್ಚನೆಯ ಮಾಡಿದಡೆ,
ಆ ದೇವತಾರ್ಚನಾಸಿದ್ಧಿಯೂ ಬಯಲು.
ಶ್ರೀವಿಭೂತಿಯ ಬಿಟ್ಟು ವಿದ್ಯವ ಸಾಧಿಸಿದಡೆ,
ಆ ವಿದ್ಯಾಸಿದ್ಧಿಯು ಬಯಲು.
ಶ್ರೀವಿಭೂತಿಯ ಬಿಟ್ಟು ವೇದವ ಪಠಿಸಿದಡೆ,
ಆ ವೇದಸಿದ್ಧಿಯು ಬಯಲು.
ಅದೆಂತೆಂದಡೆ:ಲೈಂಗೇ-
ನ ದೀಕ್ಷಾನ ತಪೋ ಮಂತ್ರಂನ ಯಜ್ಞೋ ದೇವತಾ ನ ಚ |
ವಿದ್ಯಾ ನೈವಾಗಮಜ್ಞಾನಂ ಭಸ್ಮಮಾಹಾತ್ಮ್ಯವರ್ಜಿತಂ ||
ಎಂದುದಾಗಿ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ,
ನಿಮ್ಮ ದಿವ್ಯಾಲಂಕಾರಮಪ್ಪ ದಿವ್ಯಭಸಿತವ ಬಿಟ್ಟ
ಪಂಚಮಹಾಪಾತಕಂಗೆ ಆವ ಕಾರ್ಯವೂ ಸಿದ್ಧಿಯಿಲ್ಲ.