Index   ವಚನ - 98    Search  
 
ಹರಂಗೆ ಅಜ ಹರಿ ಮೊದಲಾದ ದೈವಂಗಳ ಸರಿಯೆಂಬ ನರಕಿಗಳ, ಗುರುವಿಂಗೆ ನರರ ಸರಿಯೆಂಬ ಕಡುಪಾಪಿಗಳ, ಪರಶಿವಧರ್ಮಕ್ಕೆ ವೇದಾಗಮಂಗಳ ಸರಿಯೆಂಬ ಪಾತಕರ, ಪರಶಕ್ತಿ ಜಗದಂಬೆ ಉಮಾದೇವಿಯರಿಗೆ ಉಳಿದಾದ ಶಕ್ತಿಗಳ ಸರಿಯೆಂಬ ಕರ್ಮಿಗಳ, ಇಂತಿವರ ಮುಖವ ನೋಡಿದವರಿಗೆ ನರಕವಲ್ಲದೆ ಮತ್ತೊಂದು ಗತಿಯಿಲ್ಲ. ಇಂತಿವರ ಹೊರೆಯಲ್ಲಿರಲಾಗದು, ಒಡನೆ ನುಡಿಯಲಾಗದು, ಒಂದಾಸನದಲ್ಲಿ ಕುಳ್ಳಿರಲಾಗದು. ಶಿವಂ ಬ್ರಹ್ಮಾದಿಭಿಃ ಸಾಮ್ಯಂ ಗುರುಃ ಪ್ರಾಕೃತೈಸ್ಸಮಂ | ಶಿವಂ ವಿದ್ಯಾ ಚ ವೇದಾದ್ಯೈರ್ಮನುತೇ ಯಸ್ತು ಮಾನವಃ || ಸ ಪಾಪೀ ದುರ್ಮತಿಃ ಕ್ರೂರಃ ಶ್ವಪಚಃ ಶ್ವಪಚಾಧಮಃ | ಶಿವಂ ಬ್ರಹ್ಮಾದಿಭಿಃ ಸಾಮ್ಯಂ ಶಿವಂ ಲಕ್ಷ್ಯಾದಿ ಶಕ್ತಿಭಿಃ || ಸ್ವಗುರುಂ ಪ್ರಾಕೃತೈಸ್ಸಾರ್ಧಂ ಯೇ ಸ್ಮರಂತಿ ವದಂತಿ ಚ | ತೇಷಾಂ ಪಾಪಾನಿ ನಶ್ಯಂತಿ ಶ್ರೀಮತ್ ಪಂಚನದಾಶ್ರಯಃ || ಇಂತೆಂದುದಾಗಿ, ಇದು ಕಾರಣ, ಇಂತೀ ಮರುಳು ದುರಾತ್ಮರನೆನಗೆ ತೋರಿಸದಿರಯ್ಯಾ. ಬಸವಪ್ರಿಯ ಕೂಡಲಚೆನ್ನಸಂಗಯ್ಯಾ, ಬೇಡುವೆ ನಿಮ್ಮದೊಂದೇ ವರವನು.