Index   ವಚನ - 4    Search  
 
ನಾನಾ ಜನ್ಮಂಗಳ ತಿರುಗಿ ಮಾನವ ಜನ್ಮಕ್ಕೆ ಬಂದು ಲಿಂಗೈಕ್ಯನಾಗಿರುವುದೇ ಚಂದ. ಶಾಸ್ತ್ರಂಗಳ ಓದಿ ಸಂಪಾದನೆಯ ಮಾಡಿ ಹೇಳಿ ಕೇಳುವ ಅಣ್ಣಗಳಿರಾ ಕೃತಯುಗದಲ್ಲಿ ಹನ್ನೆರಡು ಭಾರ ಜ್ಯೋತಿರ್ಲಿಂಗವನು ಬ್ರಹ್ಮರ್ಷಿಗಳು ತಮ್ಮ ವೇದಮಂತ್ರದಿಂದ ನಿರ್ಮಿತವ ಮಾಡಿದ ಲಿಂಗವು ರವಿ ಶಶಿ ಆದಿಗಳು ಇರುವನಂತ ಸ್ಥಾವರಲಿಂಗವಾಗಿ ಸ್ಥಾಪ್ಯಗೊಂಡವು ಕಾಣಿರೊ. ತ್ರೇತಾಯುಗದಲ್ಲಿ ಲಕ್ಷ ಲಿಂಗವನು ನಮ್ಮ ರವಿಕುಲ ರಘುರಾಮರು ತಮ್ಮ ವೇದಮಂತ್ರದಿಂದ ನಿರ್ಮಿತವ ಮಾಡಿದ ಲಿಂಗವು ರವಿ ಶಶಿಯಾದಿಗಳು ಇರುವನಕ ಸ್ಥಾವರಲಿಂಗವಾಗಿ ಸ್ಥಾಪ್ಯಗೊಂಡಿದ್ದವು ಕಾಣಿರೋ. ದ್ವಾಪರಯುಗದಲ್ಲಿ ಸೋಮವಂಶಿಕರು ತಮ್ಮ ವೇದಮಂತ್ರದಿಂದ ನಿರ್ಮಿತವ ಮಾಡಿವ ಲಿಂಗವು ಗ್ರಾಮಕ್ಕೆ ಒಂದು ಕಲ್ಕೇಶ್ವರನಾಗಿ ರವಿ ಶಶಿಗಳಿರುವನಕ ಸ್ಥಾವರಲಿಂಗವಾಗಿ ಸ್ಥಾಪ್ಯಗೊಂಡವು ಕಾಣಿರೋ. ಕಲಿಯುಗದಲ್ಲಿ ಹುಟ್ಟಿದ ಮನುಜರು ಕೃತ, ತ್ರೇತಾ, ದ್ವಾಪರ ಇವು ಮೂರು ಯುಗದಲ್ಲಿ ಬ್ರಹ್ಮ ಕ್ಷತ್ರಿಯರು ತಮ್ಮ ವೇದಮಂತ್ರದಿಂದ ನಿರ್ಮಿತವ ಮಾಡಿ, ಇದ್ದ ಲಿಂಗವನು ಅತಿಗಳೆದು ಇಷ್ಟಲಿಂಗಯೆಂದು ಅದಕ್ಕೆ ಪಾದ್ಯ ತೀರ್ಥ ಪ್ರಸಾದವನು ಅರ್ಪಿಸಿ, ಹುಟ್ಟಿದ ಮನುಜರೆಲ್ಲ ತಲೆತಲೆಗೊಂದು ಲಿಂಗವನು ಕಟ್ಟಿಕೊಂಡಿದ್ದರೇನಯ್ಯ, ಆ ಲಿಂಗಕ್ಕೆ ನಿಷ್ಕ್ರಿಯವಾಗಲಿಲ್ಲ. ಕಾರ್ಯಕ್ಕೆ ಬಾರದೆ ಅಕಾರ್ಯವಾಗಿ ಹೋಗಿತ್ತು ಕಾಣಿರೋ. ಅದು ಎಂತೆಂದರೆ: ಕೃತಯುಗದಲ್ಲಿ ಹುಟ್ಟಿದ ಮನುಜರು ಸುವರ್ಣಲಿಂಗವನು ಪೂಜೆಯ ಮಾಡಿಪ್ಪರು. ಆ ಸುವರ್ಣವು ಕಲಿಯುಗದಲ್ಲಿ ಹುಟ್ಟಿದ ಮನುಜರ ರಾಯರ ದೇವರ ಭಂಡಾರಕ್ಕೆ ಯೋಗ್ಯವಾಯಿತ್ತು ಕಾಣಿರೋ. ತ್ರೇತಾಯುಗದಲ್ಲಿ ಹುಟ್ಟಿದ ಮನುಜರು ಕಾರಪತ್ರದ ಲಿಂಗದ ಪೂಜೆಯ ಮಾಡಲು, ಆ ಕಾರಪತ್ರದ ಲಿಂಗವು ಕಲಿಯುಗದಲ್ಲಿ ಹುಟ್ಟಿದ ಮನುಜರ ರಾಯರ ದೇವರ ಭಂಡಾರಕ್ಕೆ ಯೋಗ್ಯವಾಗಿತ್ತು ಕಾಣಿರೋ. ದ್ವಾಪರಯುಗದಲ್ಲಿ ಹುಟ್ಟಿದ ಮನುಜರು ನಾಗತಾಮ್ರದ ಲಿಂಗವನು ಪೂಜೆಯ ಮಾಡಲು ಆ ನಾಗತಾಮ್ರದ ಲಿಂಗವು ಕಲಿಯುಗದಲ್ಲಿ ಹುಟ್ಟಿದ ಮನುಜರ ರಾಯರ ದೇವರ ಭಂಡಾರಕ್ಕೆ ಯೋಗ್ಯವಾಯಿತ್ತು ಕಾಣಿರೋ. ಕಲಿಯುಗದಲ್ಲಿ ಹುಟ್ಟಿದ ಮನುಜರು ಕಲ್ಲುಲಿಂಗವನು ತಮ್ಮ ಕೈಲ್ಹಿಡಿದುಕೊಂಡು ಪಂಚಮುಖದ ಪರಮೇಶ್ವರದೇವರು ಎಮ್ಮ ಕರಸ್ಥಲಕ್ಕೆ ಬಂದನೆಂದು ಬಿಂಕವನು ಹೇಳುವ ಡೊಂಕುಮನುಜರು ಕಾಯ ಅಸುವಳಿದು ನೆಲಕ್ಕೆ ಬಿದ್ದು ಹೋಗುವಾಗ ಕೈಯಲ್ಲಿ ಕಲ್ಲುಲಿಂಗವು ಭೂಮಿ ಆಸ್ತಿಯನು ಭೂಮಿ ಕೂಡಿ ಹೋಗುವಾಗ ಓಂ ನಮಃಶಿವಾಯ ಎಂಬ ಮಂತ್ರವು ಮರೆತು ಹೋಯಿತು. ಅದ ಕಂಡು ನಗುತಿರ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.