ಪೂರ್ವವನಳಿದು ಪುನರ್ಜಾತನಾದೆನೆಂದು
ಪೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ,
ನಿಮ್ಮ ಅಂಗ, ಆ ಈಶ್ವರದೇವರು ಹುಟ್ಟಿಸಿದ
ಮೂರೂವರೆ ಮೊಳದ ಸ್ಥೂಲಕಾಯವಾಗಿ ಜೀಕಿತ್ತು.
ಬ್ರಹ್ಮಕಲ್ಪನೆಯ ಮಾನವನು ಜಾಜಿಯನಾಗಿಸಿ
ಮರುವಾದೆ ಮನುಜರ ಕೈಯಲ್ಲಿ ಅನ್ನ ಉಣ್ಣದೆ,
ಅಂಗಿಯ ಕೊಳ್ಳದೆ, ಸ್ವರ್ಗ-ಮರ್ತ್ಯ-ಪಾತಾಳ
ಇವು ಮೂರು ಲೋಕವನು ಬಿಟ್ಟು,
ಬೇರೊಂದು ಸ್ಥಳದಲ್ಲಿ ಇರಬಲ್ಲರೆ,
ಆತನಿಗೆ ಪೂರ್ವವನಳಿದ
ಮನುಜೋತ್ತಮನೆಂದೆನ್ನಬಹುದು ಕಾಣಿರೋ.
ನಿಮ್ಮ ಅಂಗದ ಈಶ್ವರದೇವರು ಹುಟ್ಟಿಸಿದ
ಮೂರುವರೆ ಮೊಳದ ಸ್ಥೂಲಕಾಯವನು
ಮುಂದಿಟ್ಟುಕೊಂಡು
ಹಲವು ಜಾತಿಗಳ ನೆಲೆಯನರಿಯದೆ,
ಮನೆ ಮನೆಯಲ್ಲಿ ಕಾಡಿ ಬೇಡಿ ಉಂಬುವ
ಪಾಷಂಡಿಗಳ ದೀಕ್ಷೆಯನು ಮಾಡಿಕೊಂಡು,
ಕಾವಿಯರಿವೆಯನ್ಹೊದ್ದುಕೊಂಡು
ನಾನು ಪೂರ್ವವನಳಿದು ಪುನರ್ಜಾತನಾದೆನೆಂದು
ಪೂಜೆಗೊಂಬುವ
ಜಾತಿಶ್ರೇಷ್ಠ ಅಜ್ಞಾನಿಗಳಿಗೆ ಜಾತಿಸೂತಕ ಉಳಿಯಿತೆ?
ಸುಜ್ಞಾನಿಗಳು ಹೋಗಿ ಅವರಿಗೆ ಶರಣಂ ಕೊಟ್ಟರೆ,
ಅವರಾ ಮನೆಯಲ್ಲಿ ಅನ್ನವನುಂಡರೆ, ಅಗ್ನಿಯ ಕಂಡರೆ,
ಮೊದಲೆ ತಾವೇ ಭೋಗಿಸಿ ಮೇಲೆ ಮಲಮೂತ್ರವ
ಭುಂಜಿಸಿದಂತೆ ಆಯಿತ್ತು
ಎಂದಾತ ಸಿದ್ಧಮಲ್ಲನದಾತ ಮೇಗಣಗವಿಯ
ಗುರುಶಿವಸಿದ್ಧೇಶ್ವರಪ್ರಭುವೆ.