Index   ವಚನ - 9    Search  
 
ಕವಿ ಕವಿಗಳೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ! ನಿಮ್ಮ ಸಪ್ತಪಾತಾಳದಿಂದ ಅತ್ತತ್ತವಿತ್ತು, ಮುಂದೆ ಭುವನದ ಮೂಲವ ತಿಳಿದು ಗುಪ್ತಮಂಡಲವೆಂಬ ಹುತ್ತದೊಳಗೆ ಇರ್ದ ಘಟಸರ್ಪದ ಅಡಿಯ ಮೇಲಕ್ಕೆ ಮಾಡಿ, ಒಡನೆ ನಿಲಿಸಬಲ್ಲರೆ ಆತನಿಗೆ ಆ ನರಕವಿ ವರಕವಿಗಳ ಕಣ್ಣಿಗೆ ಕಾಣಬಾರದಂತಹ ಮುಸುಕಿನ ಮಂದಿರದ ಮನೆಯೊಳಗೆ ಇದ್ದುಕೊಂಬ, ತನ್ನ ತಲೆಕೆಳಗಾಗಿ ಪಾದ ಮೇಲಾಗಿ ಉಧೋ ಎಂದು ಅರ್ತು ಗುರ್ತವಿಟ್ಟು ಆಳಬಲ್ಲರೆ ಆತನಿಗೆ ಮಹಾಶಿವಜ್ಞಾನಿ ಎಂದೆನ್ನಬಹುದು ಕಾಣಿರೋ. ನಿಮ್ಮ ಅಂಗ ಸ್ವರ್ಗ ಮರ್ತ್ಯ ಪಾತಾಳ, ಈರೇಳು ಭುವನ, ಹದಿನಾಲ್ಕುಲೋಕ, ಪಂಚಶತಕೋಟಿ ಭುವನದ ವಿಸ್ತಾರವನ್ನೆಲ್ಲ ತನ್ನ ಅಂತರಂಗದೊಳಗೆ ನೋಡಿಕೊಂಡು, ಹೊರಗೆ ಶಿವಶಾಸ್ತ್ರ ಆಗಮ ಪುರಾಣಂಗಳ ನಿರ್ಮಿತವ ಮಾಡಿ, ಇರಬಲ್ಲರೆ ಆತನಿಗೆ ಉತ್ತಮ ಶಿವಕವೀಶ್ವರ ಎಂದೆನ್ನಬಹುದು ಕಾಣಿರೋ. ನಿಮ್ಮ ಅಂಗ ಉತ್ತರ ದಕ್ಷಿಣ ಪೂರ್ವ ಪಶ್ಚಿಮ ನಾಲ್ಕು ದಿಕ್ಕಿನ ಮೂಲವ ತಿಳಿದು ಘಟಿಕಾಸ್ಥಾನವೆಂಬ ಒಂದಾಸನವ ಬರೆದು, ಎಂಬತ್ನಾಲ್ಕು ಆಸನದ ಭೇದದ ಗುಣಾವಗುಣಗಳೆಲ್ಲಾ ಒಂದೇ ಆಸನದಲ್ಲಿ ತಿಳಿದು, ಸತ್ಯವ ಹಿಡಿದು, ನಿತ್ಯನಾಗಿರಬಲ್ಲರೆ ಆತ ತನಗೆ ಬಂದಂತಹ ಮೂನ್ನೂರರವತ್ತು ಕಂಟಕಗಳನ್ನೆಲ್ಲ ಬಡಬಾಗ್ನಿಯ ಕಿಚ್ಚಿನಲ್ಲಿ ಸುಟ್ಟು, ಬೂದಿಯನು ಗಂಗೆಯ ಕೂಡಿಸಿ, ಲಿಂಗಾಂಗಿಯಾಗಿರಬಲ್ಲರೆ ಆತನಿಗೆ ಸ್ನಾನ ನೇಮ ಸಂಧ್ಯಾವಂದನ ಜಪ ಗಾಯತ್ರಿ ಸಪ್ತಗಾಯತ್ರಿಗಳ ಸ್ಥಾನಸ್ಥಾನದಲ್ಲಿ ನುಡಿದು ಪ್ರಾಣಲಿಂಗದ ದರುಶನವಾಗಿರಬಲ್ಲರೆ, ಆತನಿಗೆ ಅನಂತಕಾಲ ಚಕ್ರವ ಗೆಲಿದಂತಹ ಅಖಂಡಪರಿಪೂರ್ಣ ಮಹಾಮಹಾದೇವರೆಂದೆನ್ನಬಹುದು ಕಾಣಿರೋ. ಇಂತು ತಮ್ಮ ಅಂತರಂಗದೊಳಗಿದ್ದ ಕುಲಭಕ್ತನ ಭೇದವನರಿಯದೆ, ನರಕವಿ ವರಕವಿಗಳು ಹಲವು ಶಾಸ್ತ್ರ ಆಗಮ ಪುರಾಣಗಳ ಓದಿ, ಬಹುಮಾತುಗಳ ಕಲಿತು, ಬಂದ ಬರವು ನಿಂದ ನಿಲವು ತಡಿಯನರಿಯದೆ, ಒಂದೊಂದನೆ ಪದ ಪದ್ಯವನು ಮಾಡಿ, ಆಸ್ಥಾನದ ಸಭೆಯೊಳಗೆ ಕುಳಿತುಕೊಂಡು ಹಾಡಿ ಪಾಡುವಂತಹ ಕವಿಗಳೆಂಬ ಕತ್ತೆಗಳ ಕಂಡು ನಗುತಿರ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಶಿವಸಿದ್ಧೇಶ್ವರಪ್ರಭುವೆ.