ಅಪರಸ್ಥಾನದಲ್ಲಿ ಆನಂದಬ್ರಹ್ಮವ ಭೇದಿಸುವ ಪರಿಯೆಂತೋ?
ಪೂರ್ವದಕ್ಷಿಣವೆಂಬ ದಿಕ್ಕುಗಳಲ್ಲಿ ಸಮನಿಸುವ
ಆತ್ಮ ಅಂತರ್ಯಾತ್ಮ ಭೂತಾತ್ಮ ಸರ್ವಾತ್ಮ ಪರಮಾತ್ಮವೆಂಬ
ಆತ್ಮ ಪಂಚಕಗಳೆಂಬವನು
ಹಿಂದು ಮುಂದರಿಯದೆ, ಮುಂದು ಹಿಂದೆಂದರಿಯದೆ
ಸಂಯೋಗದಲಿಕ್ಕಿ ಪ್ರಯೋಗಿಸಿಹೆನೆಂಬ ಯೋಗಿ ಕೇಳಾ;
ಪೂರ್ವವಾವುದು? ದಕ್ಷಿಣವಾವುದು?
ಪೂರ್ವದಲ್ಲಿ ದಿವಾಕರರು
ಹನ್ನೆರಡರ ಆನಂದ ಪ್ರಭೆಯಲ್ಲಿ ಭವಿಸಲ್ಪಟ್ಟ
ನಯನದ ಕಿರಣದ ಕೊನೆಯ ಮೊನೆಯ ಮೇಲೆ
ದಿವ್ಯಾಂಗಯೋಗ ಸಮನಿಸುವ ಪರಿಯೆಂತು ಹೇಳಾ?
ದಕ್ಷಿಣದಲ್ಲಿ ದಿಗ್ವಳಯ ಹದಿನಾಲ್ಕರ ವ್ಯಾಪ್ತಿಯ
ಸಂಚರಿಸದೆ ಸಮನಿಸುವ ಕೋಹಂ ತತ್ತ್ವಾರ್ಥದಿಂದತ್ತ
ನಾಹಂ ಪರಮಾರ್ಥದಿಂದತ್ತ
ಸೋಹಂ ಸದ್ಭಕ್ತಿಯ ಮುಟ್ಟಿದ ದಾಸೋಹ
ನಿನ್ನಲ್ಲಿ ಸಂಯೋಗವ ಎಂತು ಮಾಡುವೆ ಹೇಳಾ?
ಯೋಗಿ ನೀನು
ಯೋಗಕ್ಕೆ ಹರಿವಾವುದು? ಯೋಗಕ್ಕೆ ನೆಲೆ ಯಾವುದು?
ಮತ್ತೆ ಪೆರತನರಿಯದೆ
ಶಾಶ್ವತವು ನೀನೆ ನೀನೆ ಎಂದೆನ್ನು,
ಸಕಲನಿಷ್ಕಲದೊಳಗೆ ನೀನೆ ನೀನೆಯೆನ್ನಾ
ತಾತ್ಪರ್ಯವರ್ಮ ಕಳೆಗಳೊಳಗೆ ನೀನೆ ನೀನೆಯೆಂದೆನ್ನಾ.
ಓಂ ಗ್ರಾಂ ಘ್ರೀಂ ಘ್ರೂಂ ಎಂಬಕ್ಷರ
ಚತುಷ್ಟಯದ ಮೇಲೆ
ಶುದ್ಧ ಸಂಯೋಗವೆಂಬ ಗದ್ದುಗೆಯಿಕ್ಕಿ
ಅಕ್ಷರದ್ವಯದ ಆನಂದರಾಜ ಕುಳ್ಳಿದ್ದೈದಾನೆ ಜಪಿಸುತ.
ಆ ಜಪವು ನಿತ್ಯ, ಅದು ಮುಕ್ತಿ, ಅದು ಸತ್ಯ.
ಅದು ಪದಕ್ಕೆ ಫಲಕ್ಕೆ ಭವಕ್ಕೆ ದೂರ,
ವರ್ಣಾಶ್ರಯವ ಮೀರಿತ್ತು ತತ್ತ್ವಾ ಪ್ರಾಪಂಚಿಕವ ಜರಿಯಿತ್ತು.
ಮಂತ್ರಂಗಳ ಕೈಯಿಂದ ವಂದಿಸಿಕೊಂಡಿತ್ತು.
ಮೂರರಲ್ಲಿ ಭವಿಸಿತ್ತು, ಆರರಲ್ಲಿ ಫಲವಾಯಿತ್ತು.
ಮೂವತ್ತಾರರಲ್ಲಿ ಹಣಿತಿತ್ತು
ಯೋಗಿಗಳ ನಡೆಸಿತ್ತು ತತ್ತ್ವಾಮಸಿ ಸಂಗಮವಾಯಿತ್ತು.
ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ
ನಿತ್ಯದಲ್ಲಿ ನಿತ್ಯವಾಯಿತ್ತು.
Art
Manuscript
Music
Courtesy:
Transliteration
Aparasthānadalli ānandabrahmava bhēdisuva pariyentō?
Pūrvadakṣiṇavemba dikkugaḷalli samanisuva
ātma antaryātma bhūtātma sarvātma paramātmavemba
ātma pan̄cakagaḷembavanu
hindu mundariyade, munde hindendariyade
sanyōgadalikki prayōgisihenemba yōgi kēḷā;
pūrvavāvudu? Dakṣiṇavāvudu?
Pūrvadalli divākararu
hanneraḍara ānanda prabheyalli bhavisalpaṭṭa
nayanada kiraṇada koneya moneya mēle
divyāṅgayōga samanisuva pariyentu hēḷā?
Dakṣiṇadalli digvaḷaya hadinālkara vyāptiya
san̄carisade samanisuva kōhaṁ tattvārthadinda
nāhaṁ paramārthadindatta
sōhaṁ sadbhaktiya muṭṭida dāsōha
ninnalli sanyōgava entu māḍuve hēḷā?
Yōgi nīnu
yōgakke harivāvudu? Yōgakke nele yāvudu?
Matte peratanariyade
śāśvatavu nīne nīne endennu,
sakalaniṣkaladoḷage nīne nīneyenna
tātparyavarma kaḷegaḷoḷage nīne nīneyendenna.
Ōm grāṁ ghrīṁ ghrūṁ embakṣara
catuṣṭayada mēle
śud'dha sanyōgavemba gaddugeyikki
akṣaradvayada ānandarāja kuḷḷiddaidāne japisuta.
Ā japavu nitya, adu mukti, adu satya.
Adu padakke phalakke bhavakke dūra,
varṇāśrayava mīrittu tattva prāpan̄cikava jariyittu.
Mantraṅgaḷa kaiyinda vandisikoṇḍittu.
Mūraralli bhāvisittu, āraralli phalavāyittu.
Mūvattāraralli haṇatittu
yōgigaḷa naḍesittu tattvamasi saṅgamavāyittu.
Kapilasid'dhamallikārjunayyanemba
nityadalli nityavāyittu.