Index   ವಚನ - 91    Search  
 
ಅಯ್ಯಾ, ನೀನು ಅನಾಹತ ಲೋಕದಲ್ಲಿ ಪ್ರವೇಶಿಸುವಾಗ ಅಕ್ಷರವೆರಡರ ತದ್ರೂಪವಾಗಿರ್ದೆಯಯ್ಯಾ. ನೀನಾದಿ ಬ್ರಹ್ಮಾಂಡವನರಿವಾಗ ಶಕ್ತಿತ್ರಯದ ಶಾಖೆಯಾಗಿರ್ದೆಯಯ್ಯಾ. ನೀನು ಸಕಲದಲ್ಲಿ ನಿಃಕಲದಲ್ಲಿ ಸ್ವಾನುಭಾವಸಂಬಂಧದಲ್ಲಿ ಅಕ್ಷರವೆರಡರಲ್ಲಿ ಆಂದೋಳನವಾಗಿ ಪ್ರವೇಶಿಸುವಾಗ ಶುದ್ಧ ನೀನಾಗಿ, ಸಿದ್ಧ ನೀನಾಗಿ, ಪ್ರಸಿದ್ಧ ನೀನಾಗಿ ಪಂಚ ಮಹಾವಾಕ್ಯಂಗಳೆ ನಿನ್ನ ಮನೆಯಾಗಿ ಓಂ ಎಂಬುದೆ ನಿನ್ನ ತನುವಾಗಿ, ಆನಂದವೆಂಬುದೆ ನಿನ್ನ ಮೂರ್ತಿಯಾಗಿ, ಪರಾಪರ ರೂಪೆ ನಿನ್ನವಯವವಾಗಿ ನೀನೆಪ್ಪೆಯಯ್ಯಾ ನಿತ್ಯಮಂಗಳರೂಪನಾಗಿ, ಸ್ವತಂತ್ರವಾಗಿ, ಪರಮಸೀಮೆಯ ಮೀರಿಪ್ಪ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಏಕಾರ್ಥವ ಮಾಡಿದ ಬಸವಣ್ಣ ಗುರುವೇ, ಶರಣು.