ಆದಿನಿರಾಳ, ಮಧ್ಯನಿರಾಳ,
ಊರ್ಧ್ವನಿರಾಳ ಅಂತೆ ನಿನ್ನ ಪರಿಯಯ್ಯಾ
ಅನಾಮಯಶೂನ್ಯನೆಂದು
ಹೊಗಳುತ್ತೈದಾರೆ ನಿನ್ನ ಹಲಬರು,
ನೀನು ಭಕ್ತಕಾರಣ ಪರಶಿವಮೂರ್ತಿಯೆಂಬುದನರಿಯರಾಗಿ.
ಎಲೆ ಅಯ್ಯಾ, ಸುಚಿತ್ತವಾದ ಲೋಕಂಗಳಲ್ಲಿ ನೀನು
ಉರುತರ ನಿತ್ಯನೆಂಬುದನರಿಯರು ಕಾಣಾ ಎಲೆ ಅಯ್ಯಾ,
ಅಯ್ಯ ನಿನ್ನ ಅನಾಹತ ಪಟ್ಟಣದಲ್ಲಿ
ಶೂನ್ಯಕಾಯನೆಂಬ ಮಹಾಗಣೇಶ್ವರನ ಮನೆಯಲ್ಲಿ
ಪದನಾಶನೆಂಬ ಯೋಗಿಯಾಗಿ ಬಂದು,
ಫಲಕ್ಕೆ ಬಿತ್ತಲಿದ್ದ ಬೀಜಂಗಳ ನೀನು ಸಂಗ್ರಹಿಸಿ
ಸ್ವಯಂಪಾಕವ ಮಾಡಿ,
ಆತ ಕಿಂಕಿಲದಿಂ ಸದ್ಭಾವವೆಂದೆಂಬ ಪರಿಯಾಣದಲ್ಲಿ
ಅಷ್ಟಪಾದಂಗಳನುಳ್ಳ ಆಧಾರವಂ ತಂದಿಟ್ಟು
ಮಥಿತ ಮರ್ಧನ, ಸುಚಿತ್ತ ಸುಗುಣಂಗಳೆಂಬ
ಓಗರವಂ ತಂದು ಎನಗೆ ಬಡಿಸಲಾಗಿ,
ನಿತ್ಯವೆಂಬ ದೀಪ್ತಿಯ ಬೆಳಗಿನಲ್ಲಿ
ಸುಚಿತ್ತದಿಂ ಆರೋಗಣೆಯಂ ಮಾಡಿ,
ರೇತೋದಾರನೆಂಬ ಗಣೇಶ್ವರ
ಲೆಕ್ಕ ಮೂವತ್ತಾರು ಸಾವಿರ ಪಟ್ಟಣಂಗಳಲ್ಲಿ
ಪ್ರವೇಶಿಸಿ ಬಂದ ಕಾಲದಲ್ಲಿ,
ನಿನ್ನ ಸುಮತಿ ಪ್ರಸನ್ನತೆ ಪರಿಣಾಮ ಪ್ರಯೋಗವೆಂಬ
ಪ್ರಸಾದ ಸ್ವೀಕಾರಂ ಮಾಡಲ್ಕಾಗಿ,
ಆತನ ಮೂರರಿಂ ಮೇಲೆ
ಹತ್ತರಿಂದೊಳಗೆ ಇದ್ದಂಥ ಹಲವೆಲ್ಲವೂ ಏಕೀಭವಿಸಿದವು.
ಆತ ನಿತ್ಯನಾದ, ಆತ ಫಲಕ್ಕೆ ಪದಕ್ಕೆ ಭವಕ್ಕೆ
ತುರೀಯ ಸಿದ್ಧ ತ್ವಮಸಿಯನೆಯ್ದಿ
ಸಂದು ಹರಿದ, ಹಂಗು ಹರಿದ,
ಆನಂದವೆಂಬ ಶ್ವೇತಜಲದಲ್ಲಿ
ಚಂದ್ರಕಾಂತದ ಮಂಟಪವನಿಕ್ಕಿ,
ಅರ್ಚನೆ ಪೂಜನೆ ವ್ಯವಹರಣೆಯೆಂಬವನತಿಗಳೆದು
ಸದ್ಧಲಿಂಗಾರ್ಚನೆಯಂ ಮಾಡಿ
ಸುಖಸಂಯೋಗದಲ್ಲಿ ಎರಡಿಲ್ಲದೆ ಮೂರ್ಛಿತವೋಗೈದಾನೆ
ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನಾ.