Index   ವಚನ - 238    Search  
 
ಇಚ್ಛಾಜ್ಞಾನ ಕ್ರಿಯಾಶಕ್ತಿ ನಿನ್ನಾಧೀನ ಕಂಡಯ್ಯಾ. ಇಚ್ಚೈಸುವುದೇನು, ಶಕ್ತಿಯೊ ಶಿವನೊ? ಬಲ್ಲಡೆ ನೀವು ಹೇಳಿರೆ? ಆನಂದಜಲದಲ್ಲಿ ಆಶ್ರಯವಾಗಿ ನಿತ್ಯಮಹೋತ್ಸವವನುಳ್ಳುದೇನು? ಶಕ್ತಿಯೊ ಶಿವನೊ? ಬಲ್ಲಡೆ ನೀವು ಹೇಳಿರೆ? ಬ್ರಹ್ಮಾಂಡಗಳು ಹಲವು ಕಂಪನವಪ್ಪಾಗ ನಿಷ್ಕಂಪವಾಗಿರಲುಳ್ಳುದೇನು? ಶಕ್ತಿಯೊ ಶಿವನೊ? ಬಲ್ಲಡೆ ನೀವು ಹೇಳಿರೆ? ಆನಂದಬ್ರಹ್ಮದಲ್ಲಿ ಆಂದೋಳವಾಗಿ ಅಕ್ಷರಬ್ರಹ್ಮವನೈದಿದ ಆದಿಶಕ್ತಿಯು ಹೋಬಳಿ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ.