ವಚನ - 267     
 
ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆಂಬ ದಿಕ್ಕಿನ ಹಂಗು ಹರಿದೆ. ನೀನುತ್ತರದಲ್ಲಿ ಓಂಕಾರ ಪ್ರದೀಪನಾಗಿ ಉತ್ತರದ್ವಾರದಲ್ಲಿ ಬಪ್ಪಾಗ ಆನೊಡನೆ ಬಂದೆ. ನೀನು ಅರಿತೂ ಅರಿಯದ ಹಾಂಗೆ ಇದ್ದೆ. ದಕ್ಷಿಣದ್ವಾರದಲ್ಲಿ ಜನಿತನಾಶವಾಗಿ ಬಪ್ಪಂದು ಆನೊಡನೆ ಬಂದು ನೀನರಿಯದಂತಿದ್ದೆ. ನೀನು ಪೂರ್ವದ್ವಾರದಲ್ಲಿ ಅಕ್ಷರದ್ವಯದ ವಾಹನವೇರಿಬಪ್ಪಲ್ಲಿ ಆನೊಡನೆ ಬಂದೆ. ನೀ ಪಶ್ಚಿಮದ್ವಾರದಲ್ಲಿ ಅವ್ವೆಯ ಮನದ ಕೊನೆಯ ಮೇಲೆ ಅವ್ಯಕ್ತಶೂನ್ಯನಾಗಿ ಬಪ್ಪಾಗ ಒಡನೆ ಬಂದೆ ಎಲೆ ಅಯ್ಯಾ. ಎನ್ನನು ಅನ್ಯಕ್ಕೊಪ್ಪಿಸುವ, ಎನ್ನನು ಶುದ್ಧ ನಾನು ನಿನ್ನವನಲ್ಲಾ. ಆನು ಬಂದ ಬರವ, ಇದ್ದ ಇರುವ ಆನರಿಯೆನಲ್ಲದೆ ನೀ ಬಲ್ಲೆ. ಅರಿದು ಕಾಡುವುದುಚಿತವೆ? ಕಪಿಲಸಿದ್ಧಮಲ್ಲಿಕಾರ್ಜುನ.