Index   ವಚನ - 269    Search  
 
ಉದಯೇ ಜನನಂ ನಿತ್ಯಂ ರಾತ್ರ್ಯಾಂ ಚ ಮರಣಂ ತಥಾ ಅಜ್ಞಾನಂ ಸರ್ವಜಂತೂನಾಂ ತದ್ವಿಧಿಶ್ಚ ಪುನಃ ಪುನಃ ಕ್ಷೀಣಾಯುರಗ್ನಿಮಾಂದ್ಯಂ ಚ ರೋಗೋದ್ರೇಕಶ್ಚ ಕಾರ್ತಿಕ!' ನಿದ್ರಾಮಾತ್ರೇಣ ಜಾಯಂತೇ ಮನಃ ಪವನಸಂಯುತಂ ಎಂದುದಾಗಿ, ರೂಪಿಲ್ಲದವಳೊಡನಾಡಿ ಮೃತ್ಯುವಿಪ್ಪ ಠಾವನರಿಯಬಾರದು. ಹಿತವೆಯಂತಿಪ್ಪಳು ಒತ್ತಿ ಕೆಡಹುವಳು. ದೊಪ್ಪನೆ ಭೂಮಿಗೆ ಒರಗಿಸುವಳು. ಇವಳು ಅಪ್ಪುವ ಅಗಲುವ ಪರಿಯೇ ನೋಡಯ್ಯಾ. ಈ ಲೋಕದೊಳಗೆಲ್ಲರೂ ಅಜ್ಞಾನನಿದ್ರಾಮಾಯಾಶಕ್ತಿಯ ಸಂಗದಿಂದ ಮರೆದೊರಗುತ್ತೈದಾರೆ. ಎನಗಿದ ತಪ್ಪಿಸಿ ನಿಮ್ಮೊಳಗಿರಿಸಿಕೊಳ್ಳಯ್ಯಾ ಪ್ರಭುವೆ ಕಪಿಲಸಿದ್ಧಮಲ್ಲಿನಾಥದೇವರ ದೇವ.