ವಚನ - 517     
 
ಚರಣ ಲಿಂಗವಾಗಿ ಕರ ಜಿಹ್ವೆಯಾಗಿ ಮಸ್ತಕದಲ್ಲಿ ಸಕಲ ಬ್ರಹ್ಮಾಂಡಗಳ ವ್ಯಾಪ್ತಿಯನು ಅಕ್ಷರವೆರಡರಲ್ಲಿ ಆಂದೋಳವಂ ಮಾಡಿ ಹರಿಯಲೀಯ್ಯದೆ ಹದುಳ ಮಾಡಿದಾತ ಗುರು! ಎನ್ನ ಶಬ್ದ-ಸ್ಪರ್ಶ-ರೂಪು-ರಸ-ಗಂಧ- ಧ್ಯಾನ-ಧಾರಣ-ಸಮಾಧಿ ಸನ್ನಿಹಿತ ಗುರು! ದೀಕ್ಷೆ ಶಿಕ್ಷೆ ಸ್ವಾನುಭಾವ ಸಂಪನ್ನತೆಯನುಳ್ಳಾತ ಗುರು! ಆದ್ಯಂತರದಲ್ಲಿ ಸಹಸ್ರ ಕಮಲದೊಳಗಣ ಕಂಜಕರ್ಣಿಕೆಯ ಮನ್ಮಸ್ತಕದಲ್ಲಿ ಒಪ್ಪಿಪ್ಪ ಅಕ್ಷರದ್ವಯದ ಆಂದೋಳನವನುಳ್ಳಾತ ಗುರು! ಅನಾಮಯಸ್ಥಾನದಲ್ಲಿ ಬಹುದಳದ ಕಮಲದೊಳಗೆ ಒಪ್ಪಿಪ್ಪ ಹಮ್ಮೆಂಬ ಬಿಂದುವಿನ ಆನಂದ ಮಧ್ಯಸ್ಥಾನದ ಶುದ್ಧ ಸಿಂಹಾಸನವನಿಕ್ಕಿ ಅದೆ ಮನೆಯಾಗಿರಲುಳ್ಳಾತ ಗುರು! ನಿತ್ಯ ನಿರಂಜನರೂಪೆ ತದ್ರೂಪಾಗಿ ಶಕ್ತಿಪಂಚಕದ ಆಜ್ಞೆಯ ಹೊದ್ದದಿಪ್ಪಾತ ಗುರು! ಅನಿಮಿಷಸ್ಥಾನದಲ್ಲಿ ಇಪ್ಪ ಶಕ್ತಿತ್ರಯದ ಕ್ರಿಯಾಕಾರವ ನಡೆಸುವಾತ ಗುರು! ತನುಗುಣಪ್ರಾಪಂಚಿಕವನತಿಗಳೆದು ಸೀಮೆಯ ಮೀರಿದ ಸಂಬಂಧಿ ಪ್ರಮಾಣಿಲ್ಲದ ಪರಮಗುರುವೆ ಕಪಿಲಸಿದ್ಧಮಲ್ಲಿಕಾರ್ಜುನಾ.