ತತ್ವ ತುರೀಯಂಗಳಿಂದತ್ತ ಮೀರಿದ ಸೀಮೆ
ಕತ್ತಲೆಯ ಒಳಗಿಪ್ಪ ಕರ ರೂಪಿನಾ,
ಎರಡು ಮತ್ತೊಂದಾಗಿ ಎರಡಿಲ್ಲದೊಂದಾಗಿ,
ಐದೆಯರು ಐವರಾ ಸಂಗಂಗಳಾ.
ಆರರಲ್ಲಿಯೆ ನಿಂದು, ತೋರಲೀಯದೆ ಸಂದ
ಕರ್ಮಂಗಳಾ ಮೀರಿ ಏಳರ ಒಳಗೆ
ತೋರಿ ಮತ್ತೊಪ್ಪಿಪ್ಪ ತೋರದಿಹ ಸಾರೂಪ್ಯ ಅಷ್ಟಮದಲಿ
ಆರು ಮೂರನು ಎಂಟು ಐದು ಆರನು ಹತ್ತ
ಹವಣಿಸಿದೆ ತತ್ವದಲಿ ಏಕಮಾಡಿದ
ಬ್ರಹ್ಮಲೋಕದಲಿ ಗುರುವಾಗಿ ಶಕ್ತಿಯ ಘನತರದ
ಮಸ್ತಕದ ಒದವಿಪ್ಪ ಅಕ್ಷರದ್ವಯರೂಪು
ನೀನೆ ಕಪಿಲಸಿದ್ಧಮಲ್ಲಿಕಾರ್ಜುನಾ.