ಪರಶಕ್ತಿ ಅದಿಯೈಯ್ದ ಬೆರೆಸಿ ಬೆರೆಯದೆ
ಬ್ರಹ್ಮವನರಿದೆನೆಂಬ ಯೋಗಿ ಕೇಳಾ.
ಅದು ಸಗುಣದಲ್ಲಿ ತಾತ್ಪರ್ಯ
ಅದು ನಿಷ್ಕಳದಲ್ಲಿ ನಿತ್ಯ
ಅರಿದೆನೆಂಬ ಯೋಗಿ ಕೇಳಾ.
ಅದು ಅನಾಹತದಲ್ಲಿ ಆನಂದ,
ಅದು ಭಕ್ತಿಜ್ಞಾನವೈರಾಗ್ಯವಂ ಕೂಡಿದ ಏಕಮತ
ಅದು ಪದ ನಾಲ್ಕು ಮೀರಿದ ಮಹಾಮತ.
ಅದು ಉಂಡುದನುಣ್ಣುದು, ಅದು ಬಂದಲ್ಲಿ ಬಾರದು,
ಅದು ಸಕಳದಲ್ಲಿಯೂ ತಾನೆ ನಿಷ್ಕಳದಲ್ಲಿಯೂ ತಾನೆ,
ಅದು ಪ್ರಾಪಂಚಿಕದಲ್ಲಿಯೂ ತಾನೆ, ಅದು ತಾತ್ಪರ್ಯದಲ್ಲಿಯೂ ತಾನೆ.
ಅದು ಸಕಲ ಸರ್ವದ ನಿಷ್ಕಳದ ನಿರ್ಮಲದ
ಮದದ ಮಾತ್ಸರ್ಯದ ಬಣ್ಣ ಹಲವರಿದ
ಅತಿಗಳೆದ ಪರಮಸೀಮೆಯ ಅರಿದೆನೆಂಬ ಯೋಗಿ.
ಅದು ಒಂದರಲ್ಲಿ ನಿತ್ಯ, ಎರಡರಲ್ಲಿ ತಾತ್ಪರ್ಯ,
ಮೂರರಲ್ಲಿ ಮುಕ್ತ, ನಾಲ್ಕರಲ್ಲಿ ಕ್ರೋಧಿ,
ಐದರಲ್ಲಿ ಆನಂದ, ಆರರಲ್ಲಿ ತಾನೆ,
ಇಪ್ಪತ್ತೈದು ಪಟ್ಟಣದ ತಾತ್ಪರ್ಯಂಗಳನ್ನರಿತು
ಮೂವತ್ತಾರು ವೃಕ್ಷಂಗಳ ಮೇಲೆ
ಹಣ್ಣೊಂದೆ ಆಯಿತ್ತು ಕಾಣಾ.
ಆ ಹಣ್ಣು ಹಣಿತು, ತೊಟ್ಟುಬಿಟ್ಟು
ನಿರ್ಮಳ ಜ್ಞಾನಾಮೃತದಿಂ ತುಂಬಿ
ಭೂಮಿಯ ಮೇಲೆ ಬಿದ್ದಿತು.
ಆ ಬಿದ್ದ ಭೂಮಿ ಪರಲೋಕ.
ಆ ಹಣ್ಣ ಗುರು ಕರುಣವುಳ್ಳವಂಗಲ್ಲದೆ ಮೆಲಲಿಲ್ಲ.
ದೀಕ್ಷತ್ರಯದಲ್ಲಿ ಅನಿಮಿಷನಾಗಲ್ಲದೆ
ಆ ಲೋಕದಲ್ಲಿರಲಿಲ್ಲ.
ಆ ಲೋಕದಲ್ಲಿದ್ದವಂಗೆ ಅಜಲೋಕದ ಅಮೃತವನು
ನಿತ್ಯವು ಸೇವಿಸಿ ಸತ್ಯಮುಕ್ತನಾಗಿ
ಬೇಡಿದವಕ್ಕೆ ಬೇಡಿದ ಪರಿಯ ಕೇವಲವನಿತ್ತು
ತಾನು ಕಾಂಕ್ಷೆಗೆ ಹೊರಗಾಗಿ
ಕಾಲನ ಕಮ್ಮಟಕ್ಕೆ ಕಳವಣ್ಣವಾಗಿ
ನಿತ್ಯಸಂಗಮಕ್ಕೆ ಸಂಯೋಗವಾಗಿ
ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ
ಅನಾಹತ ಮೂಲಗುರುವಾಗಿ,
ಎನ್ನನಿಷ್ಟಕ್ಕೆ ಪ್ರಾಪ್ತಿಸಿದನಯ್ಯಾ.