Index   ವಚನ - 777    Search  
 
ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕ್ರಕರ ದೇವದತ್ತ ಧನಂಜಯ - ಇಂತೀ ದಶವಾಯುಗಳು. ಅಲ್ಲಿ ಪ್ರಾಣವಾಯು ಇಂದ್ರನೀಲವರ್ಣ ಕಂಠದ ಅಧೋ ಭಾಗೆಯಲ್ಲಿರ್ದ ಹೃದಯ ಪಾದ ನಾಭಿ ನಾಶಿಕವಧರಂಗಳಲ್ಲಿ ಉಚ್ಛ್ವಾಸ ನಿಶ್ವಾಸಂಗಳಿಂದ ಚರಿಸುತ್ತಿಹುದು. ಅಪಾನವಾಯು ಇಂದ್ರಗೋಪವರ್ಣ, ವಾಯು ಶಿಶ್ನ ಉರ ಜಾನು ಪಾದ ಜಂಘೆ ನಾಭಿಮೂಲ ಜಠರದಲ್ಲಿರ್ದು ಮಲ ಮೂತ್ರಂಗಳ ಪೊರಮಡಿಸುತ್ತಿಹುದು. ವ್ಯಾನವಾಯು ಗೋಕ್ಷೀರವರ್ಣ, ಕರ್ಣ ಅಕ್ಷಿ ಘ್ರಾಣ ಗಂಡಾಗ್ರ ಗುಲ್ಫಂಗಳಲ್ಲಿ ವರ್ತಿಸುತ್ತ ಹಿಡಿವುದು ಬಿಡುವುದು ಇವು ಮೊದಲಾದ ವ್ಯಾಪಾರಂಗಳ ಮಾಡುತ್ತಿಹುದು. ಉದಾನವಾಯು ಎಳೆಮಿಂಚಿನವರ್ಣ, ಹಸ್ತಪಾದಾದಿ ಸರ್ವಸಂದುಗಳಲ್ಲಿರ್ದು ಸಂದು ಸಂದುಗಳಿಗೆ ಪಟುತ್ವಮಂ ಪುಟ್ಟಿಸುತ್ತಿಹುದು. ಸಮಾನವಾಯು ಶುದ್ಧ ಸ್ಫಟಿಕವರ್ಣ, ದೇಹ ಮಧ್ಯದಲ್ಲಿರ್ದು ಸರ್ವ ಸಂದುಗಳಲ್ಲಿ ವ್ಯಾಪಿಸಿಕೊಂಡು, ಕೊಂಡಂತಹ ಅನ್ನರಸವ ಸರ್ವಾಂಗಕ್ಕೆ ಸಮಾನವಂ ಮಾಡಿ ಅಷ್ಟಕೋಟಿ ರೋಮನಾಳಂಗಳಿಗೂ ಹಂಚಿಕ್ಕಿ ಅಂಗವಂ ಪೋಷಿಸುತ್ತಿಹುದು. ನಾಗವಾಯು ಬಾಲಸೂರ್ಯನ ವರ್ಣ, ಕಂಠಸ್ಥಾನದಲ್ಲಿರ್ದು ವರ್ಧಿ ನಿರೋಧಂಗಳಿಂದುದ್ಗಾರಮಂ ಮಾಡಿಸುತ್ತಿಹುದು. ಕೂರ್ಮವಾಯು ಕುಂದೇಂದುವಿನ ವರ್ಣ, ನೇತ್ರಮೂಲದಲ್ಲಿರ್ದು ಉನ್ಮೀಲನ ನಿಮೀಲನಾಡಿಗಳನು ಮಾಡುತ್ತಿಹುದು. ಕೃಕರವಾಯು ನೀಲವರ್ಣ ಕಾಯದಲ್ಲಿರ್ದು ಕ್ಷುಧಾದಿ ಧರ್ಮಂಗಳಂ ಮಾಡುತ್ತಿಹುದು. ದೇವದತ್ತವಾಯು ಸ್ಫಟಿಕವರ್ಣ, ತಾಳಮೂಲದಲ್ಲಿರ್ದು ಅಗುಳಿಕೆಯಾರಡಿಗಳಂ ಪುಟ್ಟಿಸುತ್ತಿಹುದು. ಧನಂಜಯವಾಯು ಸಪ್ತ ಜಾಂಬೂನದ ವರ್ಣ, ಶೋಕರಾಗಂಗಳ ಪುಟ್ಟಿಸಿ ಹಾಡಿಸುತ್ತಿಹುದು. ಇಂತೀ ದಶವಾಯುಗಳ ದೇಹವನುದ್ಧರಿಸುತ್ತಿಹವು. ಈ ವಾಯುವನೇರಿ ಜೀವನು ಈಡಾಪಿಂಗಳ ಮಾರ್ಗದಲ್ಲಿ ವ್ಯವಹರಿಸುತ್ತಿಹನು. ಈ ವಾಯುಗತಿಯನರಿದು ಯೋಗಿಸುವುದೇ ಯೋಗ. ಕಪಿಲಸಿದ್ಧಮಲ್ಲಿಕಾರ್ಜುನನೆಂಬ ನಿಜವನೈದುವದೇ ಮಾರ್ಗವು.