Index   ವಚನ - 945    Search  
 
ಯೋಗವನರಿದೆನೆಂಬೆ, ಯೋಗವನರಿದೆನೆಂಬೆ ; ಯೋಗದ ನೆಲೆಯನಾರು ಬಲ್ಲರು? ಯೋಗದ ನೆಲೆಯ ಹೇಳಿಹೆ ಕೇಳಾ- ತಾತ್ಪರ್ಯಕರ್ಣಿಕೆಯ ಮಸ್ತಕದಲ್ಲಿದ್ದ ಕುಂಭದೊಳಗೆ ತೋರುತ್ತಿದೆ; ಹಲವು ಬಿಂಬ ಹೋಗುತ್ತಿದೆ, ಹಲವು ರೂಪ ಒಪ್ಪುತ್ತಿದೆ ; ಏಕ ಏಕವಾಗಿ ಆನಂದಸ್ಥಾನದಲ್ಲಿ ಅನಿಮಿಷವಾಗುತ್ತಿದೆ ; ಪೂರ್ವಾಪರ ಮಧ್ಯ ಶುದ್ಧ ಪಂಚಮವೆಂಬ ಸ್ಥಾನಂಗಳಲ್ಲಿ ಪ್ರವೇಶಿಸುತ್ತಿದೆ ತಾನು ತಾನೆಯಾಗಿ. ಅರಿಯಾ ಭೇದಂಗಳ- ಬಿಂದು ಶ್ವೇತ ಪೂರ್ವಶುದ್ಧ ಆನಂದ ಧವಳ ಅನಿಮಿಷ ಸಂಗಮ ಶುದ್ಧ ಸಿದ್ಧ ಪ್ರಸಿದ್ಧ ತತ್ವವೆಂಬ ಪರಮಸೀಮೆ ಮುಖಂಗಳಾಗಿ, ಅಜಲೋಕದಲ್ಲಿ ಅದ್ವಯ, ನೆನಹಿನ ಕೊನೆಯ ಮೊನೆಯಲ್ಲಿ ಒಪ್ಪಿ ತೋರುವ ಧವಳತೆಯ ಬೆಳಗಿನ ರಂಜನ ಪ್ರವಾಹ ಮಿಗಿಲಾಗಿ, `ತ್ವಂ' ಪದವಾಯಿತ್ತು, ಮೀರಿ `ತ್ವಮಸಿ'ಯಾಯಿತ್ತು ಕಪಿಲಸಿದ್ಧಮಲ್ಲಿಕಾರ್ಜುನನೆಂಬ ನಾಮವ ನುಂಗಿ ಲೀಯವಾಯಿತ್ತು.