ವಚನ - 1015     
 
ಶ್ರೀಗುರು ಕರುಣಿಸಲೊಡನೆ ಬಿಟ್ಟಿತ್ತು ಮಾಯೆ. ಶ್ರೀಗುರು ಕರುಣಿಸಲೊಡನೆ ಬಿಟ್ಟಿತ್ತು ಮರವೆ. ಶ್ರೀಗುರು ಕರುಣಿಸಲೊಡನೆ ಬಿಟ್ಟಿತ್ತು ಪ್ರಪಂಚು. ಶ್ರೀಗುರು ಕರುಣಿಸಲೊಡನೆ ಬಿಟ್ಟಿತ್ತು ಎನ್ನ ಸುತ್ತಿರ್ದ ಮಾಯಾಪಾಶ. ಅದೆಂತೆಂದಡೆ: "ಗುಶಬ್ದಸ್ತ್ವಂಧಕಾರಃ ಸ್ಯಾತ್ ರುಶಬ್ದಸ್ತು ನಿರೋಧಕಃ ಅಂಧಕಾರನಿರೋಧತ್ವಾತ್ ಗುರುರಿತ್ಯ್ಕಭಿಧೀಯತೇ" ಎಂದುದಾಗಿ, ಇದನರಿದು, ಕಣ್ಣಿಂಗೆ ಸತ್ತ್ವ ರಜ ತಮವೆಂಬ ತಿಮಿರ ಕವಿದು ಅಜ್ಞಾನವಶನಾದಲ್ಲಿ ಸದ್ಗುರುವನುಪಧಾವಿಸಿ ಕಣ್ಗೆ ಔಷಧಿಯ ಬೇಡಲೊಡನೆ "ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೆ ಶ್ರೀಗುರುವೇ ನಮಃ" ಎಂದುದಾಗಿ, ಶಿವಜ್ಞಾನವೆಂಬ ಅಂಜನವನೆಚ್ಚಿ, ಎನ್ನ ಕಣ್ಣ ಮುಸುಂಕಿದ ಅಜ್ಞಾನ ಕಾಳಿಕೆಯ ಬೇರ್ಪಡಿಸಿ ತನ್ನ ಶ್ರೀಪಾದವನರುಹಿಸಿಕೊಂಡನಯ್ಯಾ, ಕಪಿಲಸಿದ್ಧಮಲ್ಲಿನಾಥಾ.