ಹೃದಯಕಮಲದ ಅಷ್ಟದಳದ
ದ್ವಾತ್ರಿಂಶತ್‍ಕುಸುಮ ಮಧ್ಯದಲ್ಲಿಪ್ಪನಾ ಸೂರ್ಯ.
ಆ ಸೂರ್ಯನ ಮಧ್ಯದಲ್ಲಿಪ್ಪನಾ ಚಂದ್ರ
ಆ ಚಂದ್ರನ ಮಧ್ಯದಲ್ಲಿಪ್ಪನಾ ಅಗ್ನಿ
ಆ ಅಗ್ನಿಯ ಮಧ್ಯದಲ್ಲಿಪ್ಪುದಾ ಕಾಂತಿ
ಆ ಕಾಂತಿಯ ಮಧ್ಯದಲ್ಲಿಪ್ಪುದಾ ಸುಜ್ಞಾನ.
ಆ ಸುಜ್ಞಾನದ ಮಧ್ಯದಲ್ಲಿಪ್ಪುದಾ ಚಿದಾತ್ಮ.
ಆ ಚಿದಾತ್ಮನ ಮಧ್ಯದಲ್ಲಿಪ್ಪುದಾ
ಚಿತ್ಪ್ರಕಾಶರೂಪನಪ್ಪ ಪರಶಿವನು.
ಇಂತಪ್ಪ ಪರಶಿವನ-
ಎನ್ನ ಸುಜ್ಞಾನಕಾಯದ ಮಸ್ತಕದ ಮೇಲೆ ಹಸ್ತವನಿರಿಸಿ,
ಮನ ಭಾವ ಕರಣೇಂದ್ರಿಯಂಗಳಿಂ ಸ್ವರೂಪೀಕರಿಸಿ,
ದೃಷ್ಟಿಗೆ ತೋರಿ,
ಕೈಯಲ್ಲಿ ಲಿಂಗವ ಕೊಟ್ಟ ಚೆನ್ನಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕಿದೆನಯ್ಯಾ ಪ್ರಭುವೆ,
ಕಪಿಲಸಿದ್ಧಮಲ್ಲಿಕಾರ್ಜುನಾ.