Index   ವಚನ - 1151    Search  
 
ಹೆಸರಿಡಬಾರದ ಲಿಂಗವ ಕರಸ್ಥಳಕ್ಕೆ ಹೆಸರಿಟ್ಟು ತಂದನೆನ್ನ ಗುರು. ಆ ಹೆಸರಿಟ್ಟ ಲಿಂಗದ ಹೆಸರು ಹೇಳುವೆನು. ಕಂಜಕನ್ನಿಕೆಯ ಹಣೆಯಲ್ಲಿ ವಿಧಿವಶವೆಂದು ಬರೆದ ಐದಕ್ಷರವೆ ಆತನ ಪರಮನಾಮ. ಅ[ವ್ಯ]ಯ ಕರಂಗಳೊಪ್ಪಿಪ್ಪ ಅಕ್ಷರಂಗಳಾರೆ ದ್ವಿತೀಯ ನಾಮ. ಅ[ ವ್ಯ]ಯ ಆನಂದ ಮನ್ಮಸ್ತಕದಲ್ಲಿ ಒಪ್ಪಿಪ್ಪ ಅಕ್ಷರದ್ವಯವೆ ಆತನ ಆಚಾರ್ಯನಾಮ. ಇಂ[ತೀ] ನಾಮತ್ರಯಂಗಳನರಿದು ಧ್ಯಾನಾರೂಢನಾಗಿ ಲಿಂಗಾರ್ಚನೆಯ ಮಾಡುವರೆತ್ತಾನೊಬ್ಬರು. ಬಸವಣ್ಣ ಮೊದಲಾದ ಸಕಲ ಪುರಾತರು, ಅ[ವ್ಯ]ಯ ಅನುಮತದಿಂದ ಶುದ್ಧ ಸಿದ್ಧ ಪ್ರಸಿದ್ಧ ಲಿಂಗಾರ್ಚನೆಯಂ ಮಾಡಿ ನೀನಾದರು. ಎನಗಿನ್ನಾವುದು [ಹದನವಯ್ಯಾ] ಕಪಿಲಸಿದ್ಧಮಲ್ಲಿಕಾರ್ಜುನಾ.