ಕಲ್ಪಿತೋದಕ ಒಂದು , ಅರ್ಪಣೋದಕ ಮೂರು,
ಮತ್ತೆ ಅಂಗೋದಕವು ತ್ರಯವಾಗಿಯು,
ಮಿಕ್ಕ ಪ್ರಸಾದೋದಕ ಅವು ಮೂರು,
ಸತ್ವರಜತಮವತಿಗಳೆದವರಿಗಲ್ಲದೆ,
ಹತ್ತು ಪಾದೋದಕವನರಿಯಲರಿದು ತಾನು
ಚಿತ್ತಶುದ್ಧನಾಗಿ ಗುರುಕರುಣದಿಂದವೆ
ಹತ್ತು ಪಾದೋದಕವ ಗ್ರಹಿಸುವ ಭಕ್ತರಿಗೆ
ಮತ್ತೆ ಸಂದಿಲ್ಲದಿಹೆ ಅವರು ನೀನು.
ಮುತ್ತು ನೀರನು ಕೂಡಿದಾನಂದ ಭೇದದೊಲು
ತತ್ತ್ವಮಸಿಯಪ್ಪನೈ ಶ್ರೀಗುರು
ಕಪಿಲಸಿದ್ಧಮಲ್ಲಿಕಾರ್ಜುನಾ.