ವಚನ - 1232     
 
ಭಕ್ತನು ಭಕ್ತಿಯಿಂದರ್ಪಣ ಮಾಡಿಸುವಡೆ, ಭಕ್ತಂಗೆ ಭಕ್ತಸ್ಥಲ. ಜಂಗಮನು ಆ ಭಕ್ತನ ಭಕ್ತಿಯ ವಹಿಸಿ ಪಾದೋದಕ ಕೊಡುವುದೆ ಆ ಜಂಗಮಕ್ಕೆ ಭಕ್ತಸ್ಥಲ. ಭಕ್ತಂಗಾಗಲಿ, ಜಂಗಮಕ್ಕಾಗಲಿ ಭಕ್ತಿಯೆ ಬೇಕು. ಭಕ್ತಿಯಿಲ್ಲದೆ ಮೆರೆವವರು ಭಕ್ತರಲ್ಲಾ ಜಂಗಮರಲ್ಲಾ ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.