ವಚನ - 1254     
 
ಹಿಂದೆ ಬಯಸಿದೆ ಕಾಳುತನದಲ್ಲಿ, ಎನ್ನ ಮಂದಮತಿಯ ನೋಡದಿರಯ್ಯಾ! ಕೆರೆ ಬಾವಿ ಹೂದೋಟ ಚೌಕ ಛತ್ರಂಗಳ ಮಾಡಿ, ಜೀವಂಗಳ ಮೇಲೆ ಕೃಪೆಯುಂಟೆಂದು ಎನ್ನ ದಾನಿಯೆಂಬರು. ಆನು ದಾನಿಯಲ್ಲವಯ್ಯಾ, ನೀ ಹೇಳಿದಂತೆ ನಾ ಮಾಡಿದೆನು. ನೀ ಬರಹೇಳಿದಲ್ಲಿ ಬಂದೆನು; ನೀ ಇರಿಸಿದಂತೆ ಇದ್ದೆನು. ನಿನ್ನ ಇಚ್ಛಾಮಾತ್ರವ ಮೀರಿದೆನಾಯಿತ್ತಾದಡೆ ಫಲ ಪದ ಜನನವ ಬಯಸಿದೆನಾದಡೆ ನಿಮ್ಮಾಣೆ! ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಭವಕ್ಕೆ ಬರಿಸದಿರಯ್ಯಾ ನಿಮ್ಮ ಧರ್ಮ!