ಶಿವನು ಚೆನ್ನನ ಮನೆಯಲ್ಲಿ
ಅಂಬಲಿಯನುಂಡನೆಂದಡೆ,
ನಮ್ಮ ಗಣಂಗಳು ನಗುವರಯ್ಯಾ;
ಕೈಬಡೆದು ಕೈಬಡೆದು ನಗುವರಯ್ಯಾ.
ಶಿವನಾಚರಣೆ ಶಿವನಿಗಿರಲಿ, ನಮಗೇಕೆಂದರು.
ಶಿವನು ಉತ್ಪತ್ತಿ ಸ್ಥಿತಿ ಲಯಂಗಳಿಗೆ ಕರ್ತನು;
ನಾವು ಉತ್ಪತ್ತಿ ಸ್ಥಿತಿ ಲಯಂಗಳನಳಿಯಬೇಕೆಂದು ಬಂದೆವಲ್ಲದೆ,
ಅವರಲ್ಲಿ ವಾಕ್ಸಾಮರಸ್ಯವಲ್ಲದೆ, ಕಾಯಸಾಮರಸ್ಯವಿಲ್ಲವು.
ಶಬ್ದವಿರಹಿತನಾಗಬೇಕೆಂಬವರಿಗೆ
ಶಬ್ದಸೂತಕವೇಕಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ ?