ವಚನ - 1287     
 
ಅಣ್ಣನ ನೋಡಿರೆ, ಲೋಕಕ್ಕೆ ಜಗದಕಣ್ಣ ಮದವ ಕಳೆದನು. ಮುಕ್ಕಣ್ಣನಿಪ್ಪೆಡೆಯ ತೋರಿದನು. ಅಣ್ಣ ಬಸವಣ್ಣ ವಾಙ್ಮನಕ್ಕಗೋಚರನು. ಮುಕ್ಕಣ್ಣನವತಾರಂಗಳನು ನಾಟಕವೆಂದರಿದು ಮೆರೆದನು. ಸತ್ಯಶುದ್ಧ ನಿರ್ಮಳ ಕೈವಲ್ಯ ವಾಙ್ಮನಕ್ಕಗೋಚರ ಬಸವಣ್ಣನು, ಅಣ್ಣಾ, ನಿಮ್ಮಿಂದ ಶುದ್ಧವ ಕಂಡೆ, ಸಿದ್ಧವ ಕಂಡೆ, ಪ್ರಸಿದ್ಧವ ಕಂಡೆನು. ಆರರಲ್ಲಿ ಆಂದೋಳವಾದೆನು, ಆರು ವ್ರತದಲ್ಲಿ ನಿಪುಣನಾದೆನು. ನೀನೊಂದು ಮೂರಾಗಿ, ಮೂರೊಂದಾರಾಗಿ ತೋರಿದ ಗುಣವಿಂತುಟಯ್ಯಾ, ಬಸವಣ್ಣ. ಇನ್ನೆನಗೆ ಆಧಿಕ್ಯರಪ್ಪುದೊಂದಿಲ್ಲ. ನಾನಿನ್ನು ಉರವಣಿಸಿ ಹರಿವೆ; ಹರಿದು ಭರದಿಂದ ಗೆಲುವೆ; ತತ್ತ್ವ ಮೂವತ್ತಾರರ ಮೇಲೆ ಒಪ್ಪಿಪ್ಪ ತತ್ತ್ವಮಸಿಯನೈದುವೆ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಬಸವಣ್ಣನ ಪ್ರಸಾದದಿಂದ ಅರಿದಪ್ಪುದೊಂದಿಲ್ಲ.