ವಚನ - 1584     
 
ಎಲ್ಲ ಪುರಾಣಕ್ಕೆ ಹೆಸರುಂಟು, ನಮ್ಮ ಪುರಾಣಕ್ಕೆ ಹೆಸರಿಲ್ಲ ನೋಡಯ್ಯಾ. ಲಿಂಗದ ಮಹತ್ವವ ಹೇಳಿದಲ್ಲಿ ಲಿಂಗಪುರಾಣವೆನಿಸಿತ್ತು. ಷಣ್ಮುಖನ ಮಾಹಾತ್ಮ್ಯವ ಹೇಳಿದಲ್ಲಿ ಸ್ಕಂದಪುರಾಣವೆನಿಸಿತ್ತು. ವೀರಭದ್ರನ ಮಾಹಾತ್ಮ್ಯವ ಹೇಳಿದಲ್ಲಿ ದಕ್ಷಖಂಡವೆನಿಸಿತ್ತು. ಶಿವನ ಮಹಿಮೆ, ಕಾಶೀಮಹಿಮೆಯ ಹೇಳಿದಲ್ಲಿ ಶಿವಪುರಾಣ ಕಾಶೀಖಂಡವೆನಿಸಿತ್ತು. ಪಾರ್ವತಿಯ ಮಾಹಾತ್ಮ್ಯವ ಹೇಳಿದಲ್ಲಿ ಕಾಳೀಪುರಾಣವೆನಿಸಿತ್ತು. ನಮ್ಮ ಪುರಾಣ ಹೆಸರಿಡಬೇಕೆಂದಡೆ, ನಿಶ್ಶಬ್ದ ನಿರವಯಲ ಪುರಾಣ ತಾನೆಯಾಯಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.