Index   ವಚನ - 1684    Search  
 
ಎಲ್ಲ ದೇವರಂತಲ್ಲ ನೋಡವ್ವಾ ಈ ದೇವ: ಮೊಲೆಯ ನಂಬಿ[ದ] ನಂಬಿಯಣ್ಣಂಗೆ ಮುದ್ದು ಕುಂಟಣಿಗನಾದ. ಎಲ್ಲ ದೇವರಂತಲ್ಲ ನೋಡವ್ವಾ ಈ ದೇವ: ಸರಳಿಲೆ ಹೊಯ್ದ ಪಾಂಡವಂಗೆ ಪಾಶುಪತಾಸ್ತ್ರವನಿತ್ತ. ಎಲ್ಲ ದೇವರಂತರಲ್ಲ ನೋಡವ್ವಾ ಈ ದೇವ: ಕಲ್ಲಿಲಿಟ್ಟ ಶಂಖಿಯಂಗೆ ಕೈವಲ್ಯಪದವಿಯ ಕೊಟ್ಟನಂದು. ಎಲ್ಲ ದೇವರಂತಲ್ಲ ನೋಡವ್ವಾ ಈ ದೇವ: ಒಬ್ಬ ಬಿಲ್ಲೇಶಯ್ಯನಿಂದ ಸಹಸ್ರ ಕಂಡುಗ ಕಪಿಲೆಯಮೃತವ ಕೊಂಡ ನೋಡವ್ವಾ, ಕಪಿಲಸಿದ್ಧಮಲ್ಲಿಕಾರ್ಜುನಾ.