Index   ವಚನ - 1719    Search  
 
ಶಿಷ್ಯನಿಲ್ಲದಡೆ ಗುರು ಎಲ್ಲಿಹನಯ್ಯಾ? ಪೂಜಕನಿಲ್ಲದಡೆ ಲಿಂಗವೆಲ್ಲಹುದಯ್ಯಾ? ಭಕ್ತನಿಲ್ಲದಡೆ ಜಂಗಮವೆಲ್ಲಿಹನಯ್ಯಾ? ಜಲವಿಲ್ಲದಡೆ ಪಾದೋದಕವೆಲ್ಲಿಹುದಯ್ಯಾ? ಧೇನುವಿಲ್ಲದಡೆ ಭೂತಿಯೆಲ್ಲಿಹುದಯ್ಯಾ? ತ್ರೈಪುರವಿಲ್ಲದಡೆ ರುದ್ರಾಕ್ಷಿಗಳೆಲ್ಲಿಹವಯ್ಯಾ? ವರ್ಣಂಗಳಿಲ್ಲದಡೆ ಮಂತ್ರಂಗಳೆಲ್ಲಿಹವಯ್ಯಾ? ನಾನಿಲ್ಲದಡೆ ನೀನೆಲ್ಲಿಯವನಯ್ಯಾ? ಇವೆಲ್ಲ ಭಾವಭ್ರಮೆಯಲ್ಲದೆ, ನಿರ್ಭಾವ ನಿಜಾನಂದ ತೂರ್ಯಾತೀತ ಪರವಸ್ತುವಿನ ಕೂಟದಲ್ಲಿ ಆನು ನೀನೆಂಬುಭಯ ಭಾವ ಇದ್ದಡೆ ತೋರ ಬಾರಾ, ಮಾರಹರ ಧೀರ ಗಂಭೀರ ಕಪಿಲಸಿದ್ಧಮಲ್ಲಿಕಾರ್ಜುನವೀರ.