Index   ವಚನ - 1725    Search  
 
ಮಣ್ಣ ಕೊಟ್ಟು ಪುಣ್ಯವ ಪಡೆವೆನೆಂಬವನ ಭಾಷೆ ಹೊಲ್ಲ ಹೊಲ್ಲ. ಮಣ್ಣಿನ ಪುಣ್ಯ ಮುಕ್ಕಣ್ಣನ ಮುಖಕ್ಕೆ ಬಂದಿತ್ತು. ನೀರನೆರೆದು ಪುಣ್ಯವ ಪಡೆವೆನೆಂಬವನ ಭಾಷೆ ಹೊಲ್ಲ ಹೊಲ್ಲ. ನೀರಿನ ಪುಣ್ಯ ನಿರಂಜನನ ಮುಖಕ್ಕೆ ನಿಮಿರಿತ್ತು. ಜ್ಯೋತಿಯ ಬೆಳಗಿ ಪಾಪವ ಕಳೆವೆನೆಂಬವನ ಭಾಷೆ ಹೊಲ್ಲ ಹೊಲ್ಲ. [ಜ್ಯೋತಿಯ ಪುಣ್ಯ.... ದೀಪದ.... ಮುಖಕ್ಕೆ ಹೊಯಿತ್ತು.] [ಚಾಮರವ ಬೀಸಿ ಪಾಪವ ಕಳೆವೆನೆಂಬವನ ಭಾಷೆ ಹೊಲ್ಲ ಹೊಲ್ಲ.] ಚಾಮರದ ಪುಣ್ಯ ಚಾಮರಾಧೀಶನ ಮುಖಕ್ಕೆ ಅಮರಗೊಂಡಿತ್ತು. ದೇವಾಲಯವ ಕಟ್ಟಿ ದೇವತ್ವವ ಪಡೆವೆನೆಂಬವನ ಭಾಷೆ ಹೊಲ್ಲ ಹೊಲ್ಲ. ದೇವಾಲಯದ ಪುಣ್ಯ ಅಧೋಮುಖಂಗೆ ಸೇರಿತ್ತು. ಕೊಟ್ಟ ಭಕ್ತನಾರನೂ ಕಾಣೆ, ಕೈಕೊಂಡ ಜಂಗಮನಾರನೂ ಕಾಣೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.