Index   ವಚನ - 1799    Search  
 
ಎಲ್ಲರು ಲಿಂಗವ ಪೂಜಿಸಿ ಮಹಾಪದಸ್ಥರಾದ ಪರಿಯನೊರೆವೆ ಕೇಳಾ: ಸ್ಫಟಿಕ ಶಿಲಾಮಯ ಲಿಂಗವ ಪೂಜಿಸಿ, ಸತ್ಯಲೋಕವ ಪಡೆದ ನೋಡಾ, ವಿಧಾತನು. ಇಂದ್ರನೀಲಮಣಿ ಲಿಂಗವ ಪೂಜಿಸಿ, ವೈಕುಂಠವ ಪಡೆದ ನೋಡಾ, ನಾರಾಯಣನು. ಮರಕತಲಿಂಗವ ಪೂಜಿಸಿ ಅಮರಾವತಿಯ ಪಡೆದ ನೋಡಾ, ಉಪೇಂದ್ರನು. ಚಿಂತಾಮಣಿ ಲಿಂಗವ ಪೂಜಿಸಿ, ಅನಂತ ಸ್ತ್ರೀಯರ ಪಡೆದ ನೋಡಾ ಇಂದ್ರನು. ಸುವರ್ಣಲಿಂಗವ ಪೂಜಿಸಿ, ಅಳಕಾವತಿ ನವನಿಧಿ ಉಚ್ಚೈಶ್ರವ ಪರಮಾತ್ಮಮಿತ್ರತ್ವ ಪಡೆದ ನೋಡಾ, ಕುಬೇರನು. ಹಿತ್ತಾಳೆಯ ಲಿಂಗವ ಪೂಜಿಸಿ, ಸರ್ವಸಖತ್ವ ಸರ್ವದ್ರವ್ಯತ್ವ ಶಿವಕರುಣತ್ವ ಪಡೆದ ನೋಡಾ, ಪವನನು. ಕಾಂಸ್ಯಮಯ ಲಿಂಗವ ಪೂಜಿಸಿ, ಅಷ್ಟದಿಕ್ಕುಗಳ ಪಡೆದರು ನೋಡಾ, ವಸುಗಳು. ಮೃಣ್ಮಯ ಲಿಂಗವ ಪೂಜಿಸಿ, ಸಂಜೀವನ ಮೊದಲಾದೌಷಧಿಗಳ ಪಡೆದರು ನೋಡಾ, ಅಶ್ವಿನೀಕುಮಾರರು. ಶ್ವೇತಶಿಲಾಮಯ ಲಿಂಗವ ಪೂಜಿಸಿ, ಮಹತ್ಪ್ರಭೆ ಸಹಸ್ರಕಿರಣ ಪಡೆದ ನೋಡಾ ಸೂರ್ಯನು. ಮೌಕ್ತಿಕಲಿಂಗವ ಪೂಜಿಸಿ, ಸರ್ವಸಸಿ ಅಂಕುರತ್ವ ಶಿವಮೌಳಿಧಾರಣತ್ವ ಪಡೆದ ನೋಡಾ, ಚಂದ್ರನು. ವಿಚಿತ್ರವರ್ಣದ ಲಿಂಗವ ಪೂಜಿಸಿ, ತಮ್ಮ ತಮ್ಮ ಜನನ ಮಹತ್ವ ಪಡೆದವು ನೋಡಾ, ನಕ್ಷತ್ರಂಗಳು. ಪಚ್ಚಮಯ ಲಿಂಗವ ಪೂಜಿಸಿ, ಸರ್ವಶಾಸ್ತ್ರ ಧುರೀಣತ್ವವ ಪಡೆದ ನೋಡಾ ಬುಧನು. ಕಬ್ಬಿಣ ಲಿಂಗವ ಪೂಜಿಸಿ ದೈತ್ಯಾಚಾರತ್ವವ ಪಡೆದ ನೋಡಾ, ಶುಕ್ರನು. ವಿದ್ರುಮ ಲಿಂಗವ ಪೂಜಿಸಿ, ರಸಿಕತ್ವ ಪಡೆದ ನೋಡಾ ಮಂಗಳನು. ಮಾಣಿಕ್ಯ ಲಿಂಗವ ಪೂಜಿಸಿ, ಸರ್ವಮಂತ್ರ ಕುಶಲತ್ವ ಪಡೆದ ನೋಡಾ, ಬೃಹಸ್ಪತಿಯು. ಅಧೋಮಯ ಲಿಂಗವ ಪೂಜಿಸಿ, ಸರ್ವರಲ್ಲಿ ಕಷ್ಟತ್ವ ತನ್ನುಪಾಸಕರಲ್ಲಿ ಸಖತ್ವ ಪಡೆದ ನೋಡಾ, ಶನಿಯು. ಧೂಮ್ರಮಯ ಲಿಂಗವ ಪೂಜಿಸಿ, ಅಮೃತವ ಪಡೆದರು ನೋಡಾ, ರಾಹು ಕೇತುಗಳು. ಗೋಮಯ ಲಿಂಗವ ಪೂಜಿಸಿ, ಕಲ್ಪತರುಗಳ ಪಡೆದರು ನೋಡಾ, ನಿರುತಿಯರು. ಕುಶ ಲಿಂಗವ ಪೂಜಿಸಿ, ಅನೇಕ ಸಿದ್ಧಿಗಳ ಪಡೆದರು ನೋಡಾ, ಸಿದ್ಧರು. ಮೂಲಿಕೆ ಲಿಂಗವ ಪೂಜಿಸಿ ಮರಣದೂರತ್ವ ದುಃಖಸಮೀಪತ್ವ ಪಡೆದರು ನೋಡಾ, ಧನ್ವಂತರಿಗಳು. ಶಂಖ ಲಿಂಗವ ಪೂಜಿಸಿ, ಶಿವಪ್ರಸನ್ನತ್ವ ಪಡೆದ ನೋಡಾ, ಮಾರ್ಕಂಡೇಯನು. ಪವಿತ್ರ ಲಿಂಗವ ಪೂಜಿಸಿ, ಅಂತಃಕರಣತ್ವ ಪಡೆದ ನೋಡಾ, ಸರ್ವರಲ್ಲಿ ವಸಿಷ್ಠನು. ದರ್ಭಸ್ತಂಭ ಲಿಂಗವ ಪೂಜಿಸಿ, ಅರ್ಧಬ್ರಹ್ಮತ್ವ ಪಡೆದ ನೋಡಾ, ವಿಶ್ವಾಮಿತ್ರನು. ಕೂರ್ಚ ಲಿಂಗವ ಪೂಜಿಸಿ, ಸರ್ವದೇವತಾಶಿಕ್ಷತ್ವ ಪಡೆದ ನೋಡಾ, ವಾಮದೇವನು. ತಮ್ಮ ಜ್ಞಾನಸ್ವರೂಪಲಿಂಗವ ಸದಾ ಪೂಜಿಸಿ, ಜ್ಞಾನವ ಪಡೆದರು ನೋಡಾ, ಸನಕಾದಿ ಮಹಾಮುನಿಗಳು. ಶಿರೋರತ್ನಲಿಂಗವ ಪೂಜಿಸಿ, ದಿವ್ಯ ಸುಂದರತ್ವ ದಿವ್ಯ ಬುದ್ಧಿ ಶಕ್ತಿತ್ವ ಅನೇಕ ವರ್ಷ ನಿರ್ಜರತ್ವಪಡೆದರು ನೋಡಾ, ನಾಗರ್ಕಳು. ಕೀಟಾಕೃತಿಲಿಂಗವ ಪೂಜಿಸಿ, ಶಿವಸಭಾಪ್ರಸನ್ನತ್ವ ಪಡೆದರು ನೋಡಾ, ರಾಕ್ಷಸರು. ತ್ರಿಪುರ ಲಿಂಗವ ಪೂಜಿಸಿ, ಅನೇಕ ಪುರಗಮನತ್ವ ಕಿಂಚಿತ್ ಕಿಂಚಿತ್ ಕುಟಿಲತ್ವ ಪಡೆದರು ನೋಡಾ, ಬ್ರಹ್ಮರಾಕ್ಷಸ ಪಿಶಾಚಿಗಳು. ತ್ರಿಲೋಹ ಲಿಂಗವ ಪೂಜಿಸಿ, ಅದೃಶ್ಯತ್ವ ಗೋಪನೀಯ ಕಾರ್ಯತ್ವ ಪಡೆದರು ನೋಡಾ, ಗುಹ್ಯಕದೇವತೆಗಳು. ಪಂಚಲೋಹ ಲಿಂಗವ ಪೂಜಿಸಿ, ಅನೇಕ ಮಂತ್ರಸಿದ್ಧಿತ್ವ ಪಡೆದರು ನೋಡಾ, ಶಾಬರಾದಿ ಮಾಂತ್ರಿಕರು. ವಜ್ರ ಲಿಂಗವ ಪೂಜಿಸಿ, ನಿತ್ಯ ಶಿವಾಭಿಷೇಕ ಮಾಡುವರು ನೋಡಾ, ಸಪ್ತ ಮಾತೃಕೆಯರು. ಪ್ರಸೂನ ಲಿಂಗವ ಪೂಜಿಸಿ, ಮೂರು ಲೋಕವ ತನ್ನೊಳ್ಮಾಡಿದ ನೋಡಾ, ಮನ್ಮಥನು. ಇಚ್ಛಾಲಿಂಗವ ಪೂಜಿಸಿ, ಆದಿನಾರಾಯಣನ ಪಡೆದಳು ನೋಡಾ, ಲಕ್ಷ್ಮಿಯು. ಕ್ರಿಯಾಲಿಂಗವ ಪೂಜಿಸಿ, ಬ್ರಹ್ಮನ ಪಡೆದಳು ನೋಡಾ, ಸರಸ್ವತಿಯು. ಪತಿಯೆಂಬ ಲಿಂಗವ ಪೂಜಿಸಿ, ಪತಿವ್ರತತ್ವ ಪಡೆದರು ನೋಡಾ, ಅರುಂಧತಿ ಅನುಸೂಯೆ, ಅನಲಾಯಿ ಸಾವಿತ್ರಿಯರು. ಬಿಲ್ವಫಲಲಿಂಗವ ಪೂಜಿಸಿ, ನಮ್ಮ ಪ್ರಥಮಪಾದವ ಪಡೆದರು ನೋಡಾ, ಧರ್ಮದೇವತೆಗಳು. ಜಂಬೂಫಲ ಲಿಂಗವ ಪೂಜಿಸಿ, ಸರ್ವರ ಪ್ರಾಣಾಕರ್ಷಣವ ಪಡೆದಳು ನೋಡಾ, ಮೃತ್ಯುದೇವತೆ. ನಿಂಬಫಲ ಲಿಂಗವ ಪೂಜಿಸಿ, ನಿರೋಗ ಆರೋಗ್ಯ ಪಡೆದಳು ನೋಡಾ, ಆರೋಗ್ಯದೇವತೆ. ಆಕಾಶಲಿಂಗವ ಪೂಜಿಸಿ ಬಯಲ ಪಡೆದರು ನೋಡಾ, ದಿಗಂಬರರು. ಧ್ವಜಲಿಂಗವ ಪೂಜಿಸಿ ಖೇಚರತ್ವ ಪಡೆದರು ನೋಡಾ, ಗಗನಚಾರಿಗಳು. ಮೋಹ ಲಿಂಗವ ಪೂಜಿಸಿ, ಸರ್ವಜನವಶ್ಯತ್ವ ಪಡೆದುವು ನೋಡಾ, ಪಶುಪ್ರಾಣಿಗಳು. ಬೀಜಧಾನ್ಯ ಲಿಂಗವ ಪೂಜಿಸಿ, ಸರ್ವಧಾನ್ಯವ ಪಡೆದರು ನೋಡಾ, ಕರ್ಷಕರು. ಇಂತಪ್ಪ ನಾನಾಕೃತಿ ಲಿಂಗವ ಪೂಜಿಸಿ, ಹಲಕೆಲವು ಪದಸ್ಥರಾದರು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಲಿಂಗದಲ್ಲಿ.