ಬ್ರಹ್ಮ ನಿಮ್ಮ ಶ್ರೀಚರಣವನೊತ್ತುವ, ವಿಷ್ಣು ನಿಮ್ಮ ಶ್ರೀಹಸ್ತವನೊತ್ತುವ.
ದೇವರಾಜ ನಿಮಗೆ ಸತ್ತಿಗೆಯ ಹಿಡವ,
ವಾಯು ಬಂದು ನಿಮ್ಮ ರಾಜಾಂಗಣವನುಡುಗುವ.
ಉಳಿದಾದ ದೇವರ್ಕಳೆಲ್ಲ ನಿಮಗೆ ಜಯ ಜೀಯ ಹಸಾದವೆನುತ್ತಿಹರು.
ಮಹಾದೇವ, ಮಹಾಮಹಿಮರೆನಿಸಿಕೊಂಬವರೆಲ್ಲ ನಿಮ್ಮ ಸೇವಕರು.
ಅದೆಂತೆಂದಡೆ:
ಮಮರ್ದ ಚರಣೌ ಬ್ರಹ್ಮಾ ವಿಷ್ಣುಃ ಪಾಣಿ ಸಮಾಹಿತಃ |
ಛತ್ರಂ ಧಾರಯತೇ ಚೇಂದ್ರೋ ವಾಯುರ್ಮಾರ್ಗಂ ವಿಶೋಧಯೇತ್ |
ಅನ್ಯೇ ತು ದೇವತಾಃ ಸರ್ವ ಜಯ ಜೀಯ ಇತ್ಯಭ್ರುವನ್ ||
ಇಂತೆಂಬ ವಚನವಿಡಿದು, ನಿಮಗೆ ಸರಿಯೆಂಬವಂದಿರ
ತಲೆಯ ಮೆಟ್ಟಿ ನಡೆವೆ.
ಮಹಾಮಹಿಮ ಸೊಡ್ಡಳ,
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದನು.