ಬ್ರಾಹ್ಮಣನು ಅಧಿಕವೆಂದೆಂಬಿರಿ ಭೋ, ಆ ಮಾತದು ಮಿಥ್ಯ.
ಬ್ರಾಹ್ಮಣನಾರೆಂದರಿಯಿರಿ, ಬ್ರಾಹ್ಮಣನೆ ಶಿವನು.
`ವರ್ಣಾನಾಂ ಬ್ರಾಹ್ಮಣೋ ದೈವಃ' ವೆಂಬುದು ನಿಶ್ಚಯ.
ಆ ವರ್ಣಭಾವವೆಂದಡೆ ಬ್ರಹ್ಮ ವಿಷ್ಣು ಮಹೇಶ್ವರ ಇಂದ್ರ.
ಈ ನಾಲ್ವರು ಜಾತಿವರ್ಗಕ್ಕೆ ಸಲುವರು. ಇಂತೀ ವರ್ಣಂಗಳೆಲ್ಲಕ್ಕೆ ಶಿವನೆ ಗುರು.
ಆ ಸದಾಶಿವನ ಗುರುತ್ವಕ್ಕೆ ಏನು ಲಕ್ಷಣವೆಂದಡೆ:
ಸರ್ವಭೂತಂಗಳೊಳಗೆ ಚೈತನ್ಯಾತ್ಮಕನಾಗಿಹನು.
ಅದೆಂತೆಂದಡೆ:
`ಅಣೋರಣೀಯಾನ್ಮಹತೋ ಮಹೀಯಾನ್' ಎಂದುದಾಗಿ,
`ಆತ್ಮನಾ ಪೂರಿತಂ ಸರ್ವಂ' ಎಂದುದಾಗಿ,
`ಆತ್ಮನಾಂ ಪತಯೆ' ಎಂದುದಾಗಿ,
`ಆತ್ಮಾಂ ಅವರ್ಣಂ ಚ ಆತ್ಮಾಂ ಆಮೂರ್ತಯೆ'
`ಆತ್ಮಾಂ ಚಿದಂ ಕರ್ಮ ಆತ್ಮಮಕುಲಂ
ಯಥಾ ಆತ್ಮಾಂ ಪೂರಿತೋ ದೇವಾಯ ನಮಃ
ಆತ್ಮಾ ರುದ್ರಂ ಭವತಿ ಆತ್ಮಾ ಸದಾಶಿವಾಂ ಶೋಯೇ ತದ್ಭೂತಾಯ'
ಎಂದುದಾಗಿ,
ಆತ್ಮಂಗೆ ಆವ ಕುಲವುಂಟು ಹೇಳಿರೊ?
ಅಂತು ಆತ್ಮನು ಸರ್ವಭೂತಂಗಳಿಗೆ ಗುರುವೆಂದೆನಿಸಿಕೊಂಬ
ಆತ್ಮಂಗೆ, ಗುರು ಸದಾಶಿವನು.
ಆಯಾತ್ಮನು ಸದಾಶಿವನ ಕೂಡಲಿಕ್ಕೆ ಚೈತನ್ಯಾತ್ಮಕನಾಗಿ,
ಸರ್ವವೂ ಸದ್ಗುರುವೆನಿಸಿಕೊಂಬ
`ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂಬ ಶ್ರುತಿಯನರಿದು,
ದ್ವಿಜರು ತಾವು ಗುರುತನದ ಲಕ್ಷಣ ಬೇಡಾ.
ಗುರುವಾದಡೆ ಸಕಲವನು ಕೂಡಿಕೊಂಡಿರಬೇಡಾ.
ತಾವು ಗುರುವಾದಡೆ ಕುಲ ಅಕುಲಂಗಳುಂಟೆ?
ವರ್ಣ ಅವರ್ಣಂಗಳುಂಟೆ?
ಎಂತು, ಕುಲದೊಳಗೆ ಇದ್ದು, ಆ ಕುಲದ ಮಾತನಾಡುವ
ದ್ವಿಜಭ್ರಮಿತರನೇನೆಂಬೆ ಸೊಡ್ಡಳಾ?
Art
Manuscript
Music
Courtesy:
Transliteration
Brāhmaṇanu adhikavendembiri bhō, ā mātadu mithya.
Brāhmaṇanārendariyiri, brāhmaṇane śivanu.
`Varṇānāṁ brāhmaṇō daivaḥ' vembudu niścaya.
Ā varṇabhāvavendaḍe brahma viṣṇu mahēśvara indra.
Ī nālvaru jātivargakke saluvaru. Intī varṇaṅgaḷellakke śivane guru.
Ā sadāśivana gurutvakke ēnu lakṣaṇavendaḍe:
Sarvabhūtaṅgaḷoḷage caitan'yātmakanāgihanu.
Adentendaḍe:
`Aṇōraṇīyānmahatō mahīyān' endudāgi,
`ātmanā pūritaṁ sarvaṁ' endudāgi,
`ātmanāṁ pataye' endudāgi,
`Ātmāṁ avarṇaṁ ca ātmāṁ āmūrtaye'
`ātmāṁ cidaṁ karma ātmamakulaṁ
yathā ātmāṁ pūritō dēvāya namaḥ
ātmā rudraṁ bhavati ātmā sadāśivāṁ śōyē tadbhūtāya'
endudāgi,
ātmaṅge āva kulavuṇṭu hēḷiro?
Antu ātmanu sarvabhūtaṅgaḷige guruvendenisikomba
ātmaṅge, guru sadāśivanu.
Āyātmanu sadāśivana kūḍalikke caitan'yātmakanāgi,
sarvavū sadguruvenisikomba
`varṇānāṁ brāhmaṇō guruḥ' emba śrutiyanaridu,
Dvijaru tāvu gurutanada lakṣaṇa bēḍā.
Guruvādaḍe sakalavanu kūḍikoṇḍirabēḍā.
Tāvu guruvādaḍe kula akulaṅgaḷuṇṭe?
Varṇa avarṇaṅgaḷuṇṭe?
Entu, kuladoḷage iddu, ā kulada mātanāḍuva
dvijabhramitaranēnembe soḍḍaḷā?