ಮಹಾಕರ್ತನು ತನ್ನ ಶಕ್ತಿಯ
ವಿನೋದಕ್ಕೀ ಜಗವ ನಿರ್ಮಿಸಿದ.
ಅನಂತ ಲೋಕಂಗಳನು.
ಚಂದ್ರಸೂರ್ಯ ನಕ್ಷತ್ರ ಸಿಡಿಲು ಮಿಂಚುಗಳನು.
ತತ್ವ ವಿತತ್ವ ಕಾಲ ಕರ್ಮ ಪ್ರಳಯಂಗಳನು.
ಹೆಣ್ಣು ಗಂಡು ಜಾತಿ ವಿಜಾತಿಗಳಾದ
ನರ ಸುರ ತಿರ್ಯಗ್ಜಾತಿ
ಸ್ಥಲ ಭೋಗಾಯುಷ್ಯ ನಿದ್ರೆ ಮೊದಲಾದ
ಸಮಸ್ತ ಪ್ರಪಂಚುಗಳನು.
ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನು
ಹುಟ್ಟಿಸಿದ ತನ್ನ ವಿನೋದಕ್ಕೆ
ಮಂತ್ರವಾಹಕನು ಮಾಡಿದ ಕಟ್ಟಳೆ,
ಯಾರಿಗೂ ತಿಳಿಯಬಾರದು ನೋಡಾ,
ಸರ್ವಾತ್ಮರು ಮಲಪಾಶದಿಂದ
ಬಂಧಿಸಿಕೊಂಬ ಪಶುಗಳಾದರು
ತಾ ಪಶುಪತಿಯಾದ,
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.