ಅಂದು ಆದಿಯ ಬಿಂದುವಿಲ್ಲದಂದು, ನಿಮಗೂ ನನಗೂ
ಲಿಂಗಾಂಗವೆಂಬ ಹೆಸರಿಲ್ಲದೆ ಇರ್ದೆವೆಂದು,
ಆದಿಬಿಂದು ರೂಹಿಸಿದಲ್ಲಿ ಲಿಂಗಾಂಗವೆಂಬ ಹೆಸರು ಬಂದಿತ್ತೆಂದು,
ಅಂದು ಆದಿಯಾಗಿ ನೀವಾವಾವ ಲೀಲೆಯ ಧರಿಸಿದಡೆ,
ಆ ಲೀಲೆಗೆ ನಾನಾಧಾರವಾದೆ.
ನಿಮಗೂ ನನಗೂ ಎಂದೆಂದೂ ಹೆರೆಹಿಂಗದ ಯೋಗ.
ಅದು ನೀವು ಬಲ್ಲಿರಿ, ನಾ ಬಲ್ಲೆನು, ನುಡಿದು ತೋರಲೇಕಿನ್ನು?
ಇಂದೆನಗೆ ತನು ಯೋಗವಾದಲ್ಲಿ ನಿಜ ಹೊರತೆ?
``ಶಿವಯೋಗಿ ಶರೀರೇ ಚ ಸದಾ ಸನ್ನಿಹಿತಶ್ಯಿವಃ"
ಎಂದುದಾಗಿ, ನಿಮಗೆ ಬೇರೆ ದೇಹವಿಲ್ಲ.
ನನ್ನ ದೇಹವೆ ನಿಮ್ಮ ದೇಹವೆಂಬುದಕ್ಕೆ ನೀವೇ ಸಾಕ್ಷಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.