Index   ವಚನ - 86    Search  
 
ಸತ್ಯಸದಾಚಾರವಂತರು, ಮುನ್ನ ರುದ್ರಾಕ್ಷಿಯ ಧರಿಸಿ,ಮುಕ್ತಿಯನೈದಿದರು ನೋಡಯ್ಯ.ಇದನರಿದು, ಮುಕ್ತಿಯ ಬೀಜವೆನಿಪ ರುದ್ರಾಕ್ಷಿಯ ಧರಿಸಿದರಯ್ಯ. ದರ್ಶನ ಸ್ಪರ್ಷನದಿಂದ ಪಾಪನಾಶನ ಕಾಣಿರಯ್ಯ. ರುದ್ರನ ಐದುಮುಖವಾದ ರುದ್ರಾಕ್ಷಿ, ರುದ್ರನ ಮುದ್ರೆಯೆಂದರಿದು ಧರಿಸಿದರಯ್ಯ. ರುದ್ರಾಕ್ಷಿಯ ಧರಿಸಿದವರು ರುದ್ರರಪ್ಪರು, ತಪ್ಪದು ಕಾಣಿರಯ್ಯ. ಇಂತಿದನರಿದು, ಶಿಖೆ ಮಸ್ತಕ ಕಂಠ ಕರ್ಣ ಹೃದಯ ಬಾಹು ಮಣಿಬಂಧ[ಗಳಲ್ಲಿ] ಅಕ್ಷಮಾಲೆಯಾಗಿ ಧರಿಸಿದವರೆ ರುದ್ರರು. ಆ ರುದ್ರಾಕ್ಷಿಯ ಧರಿಸಿಹ ರುದ್ರರ, ದರ್ಶನ ಸ್ವರ್ಶನ ಸಂಭಾಷಣೆಯಿಂದ ಸರ್ವಪಾಪಕ್ಷಯವಾಗಿ, ಕೇವಲ ಮುಕ್ತಿಯಪ್ಪುದು ತಪ್ಪದಯ್ಯ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಬೆರಸಬೇಕಾದಡೆ, ಶ್ರೀರುದ್ರಾಕ್ಷಿಯನೊಲಿದು ಧರಿಸಿರಯ್ಯ.