ಭಕ್ತಿ ಜ್ಞಾನ ವೈರಾಗ್ಯದಿಂದಲ್ಲದೆ ಮುಕ್ತಿಯನೈದಬಾರದು.
ಭಕ್ತಿ ಜ್ಞಾನ ವೈರಾಗ್ಯವೇ ಮುಕ್ತಿಮಾರ್ಗಕ್ಕೆ ತ್ರಿವಿಧ ಸೋಪಾನ.
ಭಕ್ತಿ ಜ್ಞಾನ ವೈರಾಗ್ಯವಿಲ್ಲದೆ ತ್ರಿಪದವ ದಾಂಟಬಾರದು.
ಭಕ್ತಿ ಜ್ಞಾನ ವೈರಾಗ್ಯವಾವುದೆಂದಡೆ:
ಗುರು ಲಿಂಗ ಜಂಗಮದಲ್ಲಿ
ತನುವಂಚನೆ ಮನವಂಚನೆ ಧನವಂಚನೆಯಿಲ್ಲದೆ,
ತ್ರಿವಿಧವನೂ ವಿಶ್ವಾಸದೊಡಗೂಡಿ ಕೊಡುವುದೇ ಭಕ್ತಿ.
ತನ್ನ ಸ್ವರೂಪವನರಿದು ಶಿವಸ್ವರೂಪವನರಿದು
ಶಿವನ ತನ್ನ ಐಕ್ಯವನರಿವುದೇ ಜ್ಞಾನ.
ಮಾಯಾಪ್ರಪಂಚು ಮಿಥ್ಯವೆಂದರಿದು ಇಹಪರದ
ಭೋಗಂಗಳ ಹೇಯೋಪಾಯದಿಂದ
ತೊಲಗಿಸುವುದೇ ವೈರಾಗ್ಯ.
ಇದು ಕಾರಣ,
ಭಕ್ತಿ ಜ್ಞಾನ ವೈರಾಗ್ಯ ಉಳ್ಳವನೇ ಸದ್ಯೋನ್ಮುಕ್ತನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.