Index   ವಚನ - 154    Search  
 
ಶಿವಭಕ್ತಿತತ್ಪರನಾದ ಮಹಿಮನು ವಿಷಯಭ್ರಮೆ ಪುರುಷ ಪ್ರಯತ್ನವನು ಬಿಟ್ಟಾಗವೆ, ಆಗಾಮಿಕರ್ಮ ನಾಶವಾಯಿತ್ತು. ಸಂಚಿತಕರ್ಮ ವಿಷಯಾಸಕ್ತಂಗೆ ಪ್ರಾರಬ್ಧವೆನಿಸುವುದು. ಶಿವಧ್ಯಾನೈಕ ಚಿತ್ತಂಗೆ ಸಂಚಿತಕರ್ಮವಿಲ್ಲ. ಅದೇನು ಕಾರಣವೆಂದಡೆ: ಶಿವಜ್ಞಾನಾಗ್ನಿಯಿಂದ ಅದು ಬೆಂದು ಹೋಹುದಾಗಿ. ಇಚ್ಛಾ ಪ್ರಾರಬ್ಧ ಅನಿಚ್ಛಾ ಪ್ರಾರಬ್ಧವೆಂದು ಪ್ರಾರಬ್ಧವೆರಡಾಗಿಹುದು. ``ಪ್ರಾರಬ್ಧ ಕರ್ಮಣಾಂ ಭೋಗಾದೇವ ಕ್ಷಯಃ' ಎಂದುದಾಗಿ, ಅದು ಭೋಗಿಸಿದಲ್ಲದೆ ತೀರದು. ಅನಿಚ್ಛಾ ಪ್ರಾರಬ್ಧದಿಂದ ಮುಂದೆ ಸುಖವಹುದು. ಇಚ್ಛಾ ಪ್ರಾರಬ್ಧದಿಂದ ದುಃಖವಹುದಾಗಿ, ಆ ದುಃಖದಿಂದ ಸಂಸಾರವೃಕ್ಷ ಬೇರುವರಿವುದು. ಸಂಸಾರ, ವಿರಕ್ತಂಗೆ ಹುರಿದ ಬೀಜದಂತೆ ಅಂಕುರ ನಷ್ಟವಾಗಿಹುದು. ಆತ ಶಿವನೊಡನೆ ಕೂಡಿ ಭೋಗಿಸುವನಾಗಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ನಿಜವನೆಯ್ದುವನು.