Index   ವಚನ - 167    Search  
 
ಹಲವು ದೇವರುಗಳ ಭಜಿಸಿ ಹೊಲಬುದಪ್ಪಿ ಹೋದರೆಲ್ಲ. ದೇವರು ದೇವರೆಂದರೇನು? ಒಮ್ಮರ ದೇವರೇ? ವಿಶ್ವಾಧಿಪತಿ ಶಿವನೊಬ್ಬನೆ ದೇವನಲ್ಲದೆ, ಉಳಿದವರೆಲ್ಲ ದೇವರೆ? ಬ್ರಹ್ಮ ದೇವರೆಂಬಿರೆ? ಬ್ರಹ್ಮನ ಶಿರವ ಹರ ಚಿವುಟಿದ. ವಿಷ್ಣು ದೇವರೆಂಬಿರೆ? ಹತ್ತವತಾರದಲ್ಲಿ ಹರನಿಂದ ಹತಿಸಿಕೊಂಡ. ಇಂದ್ರ ದೇವರೆಂಬಿರೆ? ಇಂದ್ರನ ಮೈಯೆಲ್ಲಾ ಭಗವಾಗಿ ನಿಂದೆಗೊಳಗಾದ. ಚಂದ್ರ ದೇವರೆಂಬಿರೆ? ಕುಂದ ಹೆಚ್ಚ ತಾಳಿ ಕ್ಷಣಿಕನಾದ. ಸೂರ್ಯ ದೇವರೆಂಬಿರೆ? ಸೂರ್ಯ ಕುಷ್ಠರೋಗದಿಂದ ಭ್ರಷ್ಟಾದ. ಇನ್ನುಳಿದ ದೇವತೆಗಳು ಭಂಗಬಟ್ಟುದಕ್ಕೆ ಕಡೆಯಿಲ್ಲ. ``ಸರ್ವದೇವ ಪಿತಾ ಶಂಭುಃ ಭರ್ಗೋಃ ದೇವಸ್ಯ ಧೀಮಹಿ" ಎಂದುದಾಗಿ, ಸರ್ವದೇವರುಗಳ ಉತ್ಪತ್ಯ ಸ್ಥಿತಿ ಲಯಂಗಳ ಮಾಡುವ ಕರ್ತ ಶಿವನೊಬ್ಬನೇ ದೇವನೆಂದು ನುಡಿದೆನು ನಡೆದೆನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲದೆ ಇಲ್ಲವೆಂದು.