Index   ವಚನ - 210    Search  
 
ಅಯ್ಯಾ ಘ್ರಾಣದಲ್ಲಿ ನಿಂದು ಗಂಧವ ಗ್ರಹಿಸಿ ಗಂಧಪ್ರಸಾದವನೀವುತ್ತಿರ್ಪಿರಯ್ಯ. ಜಿಹ್ವೆಯಲ್ಲಿ ನಿಂದು ರಸವ ಗ್ರಹಿಸಿ ರಸಪ್ರಸಾದವನೀವುತ್ತಿರ್ಪಿರಯ್ಯ. ನೇತ್ರದಲ್ಲಿ ನಿಂದು ರೂಪವ ಗ್ರಹಿಸಿ ರೂಪಪ್ರಸಾದವನೀವುತ್ತಿರ್ಪಿರಯ್ಯ. ತ್ವಕ್ಕಿನಲ್ಲಿ ನಿಂದು ಸ್ವರ್ಶನವ ಗ್ರಹಿಸಿ ಸ್ಪರ್ಶನಪ್ರಸಾದವನೀವುತ್ತಿರ್ಪಿರಯ್ಯ. ಶ್ರೋತ್ರದಲ್ಲಿ ನಿಂದು ಶಬ್ದವ ಗ್ರಹಿಸಿ ಶಬ್ದಪ್ರಸಾದವನೀವುತ್ತಿರ್ಪಿರಯ್ಯ. ಮನದಲ್ಲಿ ನಿಂದು ಪರಿಣಾಮವ ಗ್ರಹಿಸಿ ಪರಿಣಾಮಪ್ರಸಾದವನೀವುತ್ತಿರ್ಪಿರಯ್ಯ. ಇಂತು ಸರ್ವೇಂದ್ರಿಯಂಗಳಲ್ಲಿ ನಿಂದು, ಸರ್ವಪದಾರ್ಥವ ಗ್ರಹಿಸಿ ಎನಗೆ ಪ್ರಸಾದವ ಕರುಣಿಸುತ್ತಿರ್ಪಿರಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.