Index   ವಚನ - 233    Search  
 
ಗುರುಲಿಂಗ ಪ್ರಸಾದವನು ಸೇವಿಸುವಲ್ಲಿ ಏಕರತಿಯಾಗಿರಬೇಕು. ಇಷ್ಟಲಿಂಗ ಪ್ರಸಾದವನು ಸೇವಿಸುವಲ್ಲಿ ಏಕರತಿಯಾಗಿರಬೇಕು. ಜಂಗಮಲಿಂಗ ಪ್ರಸಾದವನು ಸೇವಿಸುವಲ್ಲಿ ಏಕರತಿಯಾಗಿರಬೇಕು. ಗುರು ಲಿಂಗ ಜಂಗಮದ ಈ ತ್ರಿವಿಧಪ್ರಸಾದವ ಸೇವಿಸುವಲ್ಲಿ ಏಕರತಿಯಾಗಿರಬೇಕು. ಅಂತಲ್ಲದೆ, ಅನ್ಯಲಿಂಗ ಪ್ರಸಾದವ ಕೊಳಲಾಗದು. ಅದೇನು ಕಾರಣವೆಂದಡೆ: ವೀರಶೈವ ತನ್ನ ಇಷ್ಟಲಿಂಗಕ್ಕೆ ಕೊಟ್ಟು ಕೊಂಬ ಕ್ರಿಯೆಗೆ ಬಾರದಾಗಿ. ಭಕ್ತಾಂಗಕೋಟಿಗಳಲ್ಲಿ ಬೇರೆ ಬೇರೆ ಲಿಂಗ ತೋರಿತ್ತೆಂದಡೆ ಅದು ಬೇರಾಗಬಲ್ಲುದೆ? ಹಲವು ಘಟ ಜಲಗಳಲ್ಲಿ ಚಂದ್ರನೊಬ್ಬ ತೋರಿದಂತೆ ಇಂತೀ ಪರಿಯಲ್ಲಿ ಎಸೆವುದು. ಬಹುಲಿಂಗಭಾವಂಗಳೆಂದಡೆ ಬೇರಾಗಬಲ್ಲುದೆ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಅಂಗ ಹಲವಾದಡೇನು ಅಲ್ಲಿ ತೋರುವುದೊಂದೇ ವಸ್ತು.