Index   ವಚನ - 272    Search  
 
ಸ್ವಸ್ಥ ಸಿದ್ಧಾಸನದಲ್ಲಿ ಕುಳ್ಳಿರ್ದು ಅತ್ತಿತ್ತ ಕಂಪಿಸದೆ ನೆಟ್ಟೆಲುವ ನೆಟ್ಟನೆ ಮಾಡಿ ಅಧೋಮುಖಗಮನವಾಯುವ ಊರ್ಧ್ವಮುಖವ ಮಾಡಿ, ಆಧಾರವಂ ಬಲಿದು ಪ್ರಾಣವಾಯುವ ಪಾನವ ಮಾಡಿ ಆರುವೆರಳಿನಿಂ ಆರುದ್ವಾರವನೊತ್ತಲು ಶಶಿ ರವಿ ಬಿಂಬಗಳ ಮಸುಳಿಪ ನಾದ ಬಿಂದು ತೇಜವು ಕೂಡಿ ಮೂರ್ತಿಯಾಗಿ ಥಳಥಳಿಸಿ ಹೊಳೆವ ಲಿಂಗದ ಬೆಳಗಿನೊಳಗೆ ಮನವಳಿದಾತನೆ ಉನ್ಮನಿವನಿತೆಗೆ ವಲ್ಲಭನೆನಿಸುವ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಆತನೇ ಪರಮಯೋಗಿ.