Index   ವಚನ - 303    Search  
 
ಚಂದ್ರಸೂರ್ಯರ ಹಿಡಿದೆಳೆತಂದು ಒಂದೇ ಠಾವಿನಲ್ಲಿ ಬಂಧಿಸಿ, ನಿಲಿಸಿದೆ. ಸಂದಿಗೊಂದಿಯ ಹೋಗಲೀಯದೆ ಒಂದೇ ಠಾವಿನಲ್ಲಿ ನಿಲಿಸಿದೆನು. ಚಂದ್ರಸೂರ್ಯರು ಒಂದಾಗಿ ಮಹಾ ಮಾರ್ಗದಲ್ಲಿ ನಡೆದರಯ್ಯ. ಬಂಧಿಸಿದ ಮೇಲಣ ಕದಹು ತೆರಹಿತ್ತು. ಇಂದ್ರನ ವಾಹನವಳಿಯಿತ್ತು. ಮುಂದೆ ಹೋಗಿ ಹೊಕ್ಕೆನು ಕೈಲಾಸವ. ಅಲ್ಲಿರ್ದ ಅಮರಗಣಂಗಳು, ಉಘೇ ಎನಲು ಕೇಳಿ ತ್ರಿಬಂಧದ ಕೀಲು ಕಳೆಯಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು, ತನ್ನೊಳಗೆನ್ನನು ಇಂಬಿಟ್ಟುಕೊಂಡನು.