ನಿಮ್ಮ ಪೂಜೆಯ ಮಾಡುವೆನೆಂತಯ್ಯ
ಪೂಜಾದ್ರವ್ಯ ಸತ್ಕ್ರೀಯೆಯೊಳಗೆ ನೀವಿಪ್ಪಿರೆಂದರಿದು.
ನಿಮ್ಮ ಸ್ತೋತ್ರವ ಮಾಡುವೆನೆಂತಯ್ಯ
ನೀವು ಅಕ್ಷರಾತ್ಮಕರೆಂದರಿದು.
ನಿಮ್ಮ ಜಪಿಸುವೆನೆಂತಯ್ಯ
ನೀವು ಅನಾಹತಮೂಲಮಂತ್ರ ಸ್ವರೂಪರೆಂದರಿದು.
ನಿಮ್ಮ ಧ್ಯಾನಿಸುವೆನೆಂತಯ್ಯ
ನೆನೆವ ಮನದ ಕೊನೆಯ ಮೇಲೆ ನೀವಿಪ್ಪಿರೆಂದರಿದು.
ನಿಮ್ಮ ಅರಿವುತಿಪ್ಪೆನೆಂತಯ್ಯ
ಅರಿವಿಂಗೆ ಅರಿವಾಗಿ ನೀವಿಪ್ಪಿರೆಂದೆರದರಿದು.
ಇಂತು ಎನ್ನ ನಾನರಿದ ಬಳಿಕ
ಪೂಜಾಸ್ತೋತ್ರ ಜಪ ಧ್ಯಾನ ಅರಿವೆಲ್ಲವು ನೀವೆಯಾದ ಮತ್ತೆ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮಗೆ ಮಾಡುವ ಸತ್ಕ್ರೀಯೆಯೊಂದೂ ಇಲ್ಲ.