ಹರಗಣಂಗಳೆಲ್ಲ ನರಗಣಂಗಳಾಗಿ
ಒಬ್ಬರ ಆಗಿಂಗೆ ನೆರೆದು ಒಬ್ಬರ ಚೇಗಿಂಗೆ ನೆರೆದು ನುಡಿವರು.
ಒಬ್ಬರು ಒಳ್ಳಿಹರು, ಒಬ್ಬರು ಹೊಲ್ಲಹರು ಎಂದು ತಮತಮಗೆಲ್ಲ
ನುಡಿವರು, ಇದೇನು ಪಂಚಾಕ್ಷರಿ ಮಂತ್ರವೆ?
ಇದೇನು ಮಹಾನುಭಾವದ ನುಡಿಯೆ?
ಹೊತ್ತು ಹೋಕಿನ ಮಾತ ಕಲಿತವರೆಲ್ಲ,
ಮೃತ್ಯುವಿನ ಬಾಯತುತ್ತಾದುದ ಕಂಡು
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಮ್ಮ ಶರಣ ನೋಡಿ ನಗುತಿರ್ದನು.