ಕಾಯವೆಂಬ ಪಟ್ಟಣಕ್ಕೆ ಅಕಾಯನಿತ್ಯನೆಂಬರಸು
ಕ್ಷಮೆ ದಮೆ ತಿತಿಕ್ಷೆ ಶಾಂತಿ ಉಪರತಿ ಸುಮನ
ನಿರಹಂಕಾರಗಳೆಂಬ ಪರಿವಾರ.
ಆ ಪಟ್ಟಣದ ಹೊರ ಒಳಯಕ್ಕೆ ಒಂಬತ್ತು ಬಾಗಿಲು.
ಮಧ್ಯ ಒಳಯಕ್ಕೆ ನಾಲ್ಕು ಬಾಗಿಲು.
ಆ ಅರಸಿನರಮನೆಯ ಸ್ವಯಂಭುನಾಥನ
ಗರ್ಭಗೃಹಕ್ಕೆ ಎರಡು ಬಾಗಿಲು.
ಮೇಲುಶಿಖರದಲೊಂದು ಬಾಗಿಲು ಉರಿಯನುಗುಳುವದು.
ಆ ಪಟ್ಟಣದ ಅರಸು ಸ್ವಯಂಭುನಾಥನಿಗೆ
ನಿತ್ಯ ನೇಮವ ಮಾಡಲೆಂದು ಗರ್ಭಗೃಹವ ಹೊಗಲೊಡನೆ
ಆತನ ಕೈವಿಡಿದು ಉಭಯ ಬಾಗಿಲ ಹೊಕ್ಕು ಹೋಗಿ
ಉಭಯ ನಿರ್ವಯಲಾದ ನಿಲವನುಪಮಿಸಬಹುದೇ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ
ಒಂದಾದ ಲಿಂಗೈಕ್ಯವನು?