ಜಾಗ್ರತ್ ಸ್ವಪ್ನ ಸುಷುಪ್ತಿ ಎಂಬ ತ್ರಿವಿಧಾವಸ್ಥೆಯೊಳಗೆ,
ತುರ್ಯ ತುರ್ಯಾತೀತ ಸಹಜಾವಸ್ಥೆ ಎಂಬ
ಮೂರು ಕೂಡಿ ಯೋಗಿಸುವ ಯೋಗಿಗೆ,
ಸಾಲಂಬ ನಿರಾಲಂಬದೊಳಗೆ ಅಡಗಿ
ಆ ನಿರಾಲಂಬದ ನಿಶ್ಚಿಂತ ನಿವಾಸದಲ್ಲಿ
ಆತ್ಮ ಪರಮಾತ್ಮರೊಂದಾದ ಬಳಿಕ
ಅನಂತ ಸಚರಾಚರ ಒಂದು ಕಿಂಚಿತ್ತು.
ಚತುರ್ಮುಖ ಇಂದ್ರ ವಿಷ್ಣುವೆಂಬವರ ಪದ ಒಂದು ಕಿಂಚಿತ್ತು.
ಇನ್ನುಳಿದವರ ಹೇಳಲಿಲ್ಲ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
ಶರಣಂಗೆ ಹಿರಿದೊಂದಿಲ್ಲ.